ಫೆ. 4 ‘ಸ್ಪಿರಿಟ್ ಆಫ್ ಇಂಡಿಯಾ ರನ್’ ಮಂಗಳೂರು ಪ್ರವೇಶ ಆಸ್ಟ್ರೇಲಿಯಾದ ಪ್ಯಾಟ್ರಿಕ್ ಫಾರ್ಮರ್‌ರಿಂದ ಓಟ

ಮಂಗಳೂರು: ಆಸ್ಟ್ರೇಲಿಯಾದ ಮ್ಯಾರಥಾನ್ ಓಟಗಾರ ಹಾಗೂ ಮಾಜಿ ಜನಪ್ರತಿನಿಧಿ ಪ್ಯಾಟ್ರಿಕ್ ಫಾರ್ಮರ್‌ರವರ ಭಾರತದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಸ್ಪಿರಿಟ್ ಆಫ್ ಇಂಡಿಯಾ’ ಓಟ ಫೆ. 4ರಂದು ಮಂಗಳೂರು ಪ್ರವೇಶಿಸಲಿದೆ.
ಬೆಳಗ್ಗೆ 10 ಗಂಟೆಗೆ ತಲಪಾಡಿಯಲ್ಲಿ ಪ್ಯಾಟ್ರಿಕ್ ಅವರಿಗೆ ಸ್ವಾಗತ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಸಂಸತ್‌ನ ಮಾಜಿ ಸದಸ್ಯರೂ ಆಗಿರುವ 53ರ ಹರೆಯದ ಪ್ಯಾಟ್ರಿಕ್‌ರವರು ‘ಸ್ಪಿರಿಟ್ ಆಫ್ ಇಂಡಿಯಾ’ ಎಂಬ 4600 ಕಿ.ಮೀ. ಉದ್ದದ ಓಟವನ್ನು ಜನವರಿ 26ರಂದು ಕನ್ಯಾಕುಮಾರಿಯಿಂದ ಆರಂಭಿಸಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಉದ್ದಗಲದ ಓಟದ ವೇಳೆ ಸಂಗ್ರಹವಾಗುವ ಹಣವನ್ನು ಭಾರತದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಉಪಯೋಗಿಸಲಿದ್ದಾರೆ. ಜತೆಗೆ ತಮ್ಮ ಓಟದ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಇರಾದೆಯೂ ಇವರದ್ದಾಗಿದೆ. ಫೆ. 4ರಂದು ತಲಪಾಡಿಯಿಂದ ಪಡುಬಿದ್ರೆವರೆಗೆ ಪ್ಯಾಟ್ರಿಕ್ ಫಾರ್ಮರ್ ಓಡಲಿದ್ದಾರೆ. ಇವರ ಈ ಕಾರ್ಯಕ್ಕೆ ರಾಜ್ಯ ಸರಕಾರಗಳ ಜತೆ ಭಾರತೀಯ ಪ್ರವಾಸೋದ್ಯಮ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೈಜೋಡಿಸಿವೆ.
ಜ. 4ರಂದು ಮಂಗಳೂರು ಪ್ರವೇಶಿಸಿದ ಬಳಿಕ ಅವರು ಬೆಳಗ್ಗೆ 11 ಗಂಟೆಗೆ ಜಪ್ಪಿನಮೊಗರಿನ ಯೆನೆಪೊಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.








