ಕಲ್ಲಡ್ಕ: ಎಸ್ಪಿ, ಡಿಸಿಗೆ ದೂರು ನೀಡಿದ ಕಾರಣಕ್ಕೆ ಪೊಲೀಸರಿಂದ ಗೂಂಡಾವರ್ತನೆ

ಕಲ್ಲಡ್ಕ, ಫೆ. 3: ಪೊಲೀಸ್ ಕಿರುಕುಳದ ವಿರುದ್ಧ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ ಕಾರಣಕ್ಕೆ ಬಂಟ್ವಾಳ ನಗರ ಠಾಣೆ ಎಸ್ಸೈ ನಂದ ಕುಮಾರ್ ಮನೆಯೊಂದಕ್ಕೆ ನುಗ್ಗಿ ಗೂಂಡಾ ವರ್ತನೆ ನಡೆಸಿದ ಬಗ್ಗೆ ಸಂತ್ರಸ್ತರು ಆರೋಪಿಸಿದ್ದಾರೆ. ಕಲ್ಲಡ್ಕ ನಿವಾಸಿ, ಕಲ್ಲಡ್ಕ ಟಿಕ್ಕಾ ಪಾಯಿಂಟ್ ಹೊಟೇಲ್ ಮಾಲಕ ಅಶ್ರಫ್ ಎಂಬಾತ ಸೋಮವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿರುವ ಪೊಲೀಸರು, ಅಶ್ರಫ್‌ನ ಹೊಟೇಲ್‌ಗೆ ಬೀಗ ಜಡಿದಿದ್ದರಲ್ಲದೆ, ಮನೆ ಮಂದಿಗೆ ಕುರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಶ್ರಫ್‌ನ ಸಹೋದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಹಾಗೂ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂಗೆ ಮಂಗಳವಾರ ದೂರು ನೀಡಿದ್ದರು.
ಉನ್ನತ ಅಧಿಕಾರಿಗಳಿಗೆ ದೂರು ನೀಡಿದ ಕಾರಣಕ್ಕೆ ಬಂಟ್ವಾಳ ನಗರ ಠಾಣೆ ಎಸ್ಸೈ ನಂದ ಕುಮಾರ್ ಹಾಗೂ ಅವರ ಸಿಬ್ಬಂದಿ ಮಂಗಳವಾರ ಅಶ್ರಫ್‌ನ ಮನೆಗೆ ಏಕಾಏಕಿ ನುಗ್ಗಿ ಗೂಂಡಾ ವರ್ತನೆ ನಡೆಸಿದ್ದಾರೆ ಎಂದು ಮನೆ ಮಂದಿ ಆರೋಪಿಸಿದ್ದಾರೆ. ಗುಂಪು ಘರ್ಷನೆಯ ಬಳಿಕ ಅಶ್ರಫ್ ನಾಪತ್ತೆಯಾಗಿದ್ದು, ಆನತ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ನಿನ್ನೆ ರಾತ್ರಿ ಮನೆಗೆ ಬಂದ ಪೊಲೀಸರು ಮನೆ ಮಂದಿಗೆ ಅವ್ಯಚ ಶಬ್ದದಿಂದ ನಿಂದಿಸಿ, ಅನಾರೋಗ್ಯ ಪೀಡಿತ ವೃದ್ಧ ತಂದೆ, ಹಾಗೂ 5 ವರ್ಷದ ಮಗುವನ್ನು ಬೆದರಿಸಿದ್ದಾರೆ ಮನೆ ವಸ್ತುಗಳನ್ನೆಲ್ಲಾ ಬಿಸಾಡಿ ಹೋಗಿದ್ದಾರೆ ಎಂದು ಅಶ್ರಫ್‌ನ ಸಹೋದರ ಆರೋಪಿಸಿದ್ದಾರೆ. ಬುಧವಾರ ಮಧ್ಯಾಹ್ಮ ಅಶ್ರಫ್ ಸಹಿತ ಮೂವರು ಸಹೋದರರ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.







