ಬಂಟ್ವಾಳ; ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ - ನಾಮಪತ್ರ ಸಲ್ಲಿಕೆಯ ಆರ್ಭಟ ಶುರು

ಬಂಟ್ವಾಳ; ಫೆ.20 ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಕಾವು ಏರತೊಡಗಿದ್ದು, ನಾಮಪತ್ರ ಸಲ್ಲಿಕೆಯ ಆರ್ಭಟ ಶುರುವಾಗಿದೆ. ಸಂಗಬೆಟ್ಟು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬುಧವಾರ ಬಿಜೆಪಿ ಅಭ್ಯರ್ಥಿಯಾಗಿ ಜಿ.ಪಂ.ಮಾಜಿ ಉಪಾಧ್ಯಕ್ಷ , ಹಿಂ.ವರ್ಗಗಳ ಆಯೋಗದ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ, ಬಂಟ್ವಾಳ ತಾ.ಪಂ.ನ ಸಭಾಭವನದಲ್ಲಿ ಚುನಾವಣಾಧಿಕಾರಿ, ಮಂಗಳೂರು ಸಹಾಯಕ ಕಮೀಷನರ್ ಡಾ.ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಸಂಗಬೆಟ್ಟಿ ಜಿ.ಪಂ.ವ್ಯಾಪ್ತಿಗೆ ಒಳಪಟ್ಟ ಪಿಲಾತಬೆಟ್ಟು ಹಾಗೂ ರಾಯಿ ತಾ.ಪಂ.ಕ್ಷೇತ್ರಕೆ ಸಮಾನವಾಗಿ ಬಿಜೆಪಿ ಅಭ್ಯರ್ಥಿಗಳಾದ ರಮೇಶ್ ಕುಡ್ಮೇರು ಹಾಗೂ ಇಂದಿರಾ ಮಧುಕರ್ ಅವರು ನಾಮಪತ್ರ ಸಲ್ಲಿಸಿದ್ದರು. ಸರಪಾಡಿ ಜಿ.ಪಂ.ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಾವಳ ಪಡೂರು ಗ್ರಾಮಪಂಚಾಯತ್ ನ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಅವರು ಮಂಗಳವಾರ ವೇ ನಾಮಪತ್ರ ಸಲ್ಲಿಸಿದ್ದಾರೆ. ತುಂಗಪ್ಪ ಬಂಗೇರ ಅವರ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಮುಖಂಡರಾದ ಮಾಜಿ ಶಾಸಕ ರುಕ್ಮಯ ಪೂಜಾರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಭಟ್, ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ, ಎಪಿಎಂಸಿ ಸದಸ್ಯ ರೊನಾಲ್ಡ್ ಡಿ’ಸೋಜ, ಆನಂದ ಕುಲಾಲ್ ಎಡ್ತೂರು, ಕೃಷ್ಣಪ್ಪ ಪೂಜಾರಿ ದೋಟ ಮೊದಲಾದವರು ಉಪಸ್ಥಿತರಿದ್ದರು.





