ಉಡುಪಿ;ಹಸ್ತಪ್ರತಿಗಳು ಜಗತ್ತಿನ ಜ್ಞಾನದೇಗುಲದ ಆಸ್ತಿ: ಡಾ.ಜೋಯಿಸ

ಉಡುಪಿ, ಫೆ.3: ಹಸ್ತಪ್ರತಿಗಳು ಜಗತ್ತಿನ ಜ್ಞಾನದೇಗುಲದ ಆಸ್ತಿ. ಇವುಗಳ ವಿವರಗಳನ್ನೊಳಗೊಂಡ ಕೆಟಲಾಗ್ ಅಧ್ಯಯನಾದಿಗಳ ಸಂಪತ್ತು. ಇವುಗಳ ಸಂರಕ್ಷಣೆ, ಅಲಭ್ಯ ಪ್ರತಿಗಳ ಮುದ್ರಣ ಸರಕಾರ ಹಾಗೂ ವಿಶ್ವವಿದ್ಯಾನಿಲಯಗಳ ಆದ್ಯ ಕರ್ತವ್ಯ ಎಂದು ಹಿರಿಯ ವಿದ್ವಾಂಸ ಕೆಳದಿಯ ಡಾ.ಕೆಳದಿ ಗುಂಡಾ ಜೋಯಿಸ ಅವರು ಹೇಳಿದ್ದಾರೆ.
ಹಂಪಿ ಕನ್ನಡ ವಿವಿಯ ಹಸ್ತಪ್ರತಿ ಶಾಸ್ತ್ರ ವಿಭಾಗ ಹಾಗೂ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಇಂದಿಲ್ಲಿ ಪ್ರಾರಂಭಗೊಂಡ ನಾಲ್ಕು ದಿನಗಳ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಸ್ತಪ್ರತಿಗಳ ಸಂಶೋಧನೆ ತುಂಬಾ ಕ್ಲಿಷ್ಟಕರವಾದುದು. ಇದಕ್ಕೆ ತಾಳ್ಮೆ, ವಿದ್ವತ್, ಆರ್ಥಿಕ ಸೌಲಭ್ಯಗಳ ಅಗತ್ಯತೆ ಇದೆ ಎಂದ ಡಾ.ಜೋಯಿಸ ಕನ್ನಡ ಹಸ್ತಪ್ರತಿಗಳ ಅಧ್ಯಯನಕ್ಕೆ ಸ್ವಾತಂತ್ರಪೂರ್ವದಲ್ಲಿ ಅನ್ಯಭಾಷಿಗರನ್ನು ನೇಮಿಸಿದ್ದು ವಿಪರ್ಯಾಸ. ಇದರಿಂದ ಆಗಿನ ಕಾಲದ ಸಂಶೋಧನೆಗಳಲ್ಲಿ ಅನೇಕ ತಪ್ಪುಗಳು ನುಸುಳಿವೆ ಎಂದು ವಿವರಿಸಿದರು.
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿದರೆ, ಶಿಬಿರದ ನಿರ್ದೇಶಕ ಡಾ.ಎಸ್.ಎಸ್. ಅಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಹಂಪಿ ಕನ್ನಡ ವಿವಿ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಫ್.ಟಿ. ಹಳ್ಳಿಕೇರಿ ಶಿಬಿರದ ಕುರಿತು ವಿವರಗಳನ್ನು ನೀಡಿದರು. ಸಂಶೋಧಕರಾದ ಪ್ರೊ.ಸುರೇಶ್ ರೈ ವಂದಿಸಿದರೆ, ಲತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
ಬಾಕ್ಸ್ ಮಾಡಿ
ಪೂರ್ವಾಗ್ರಹಪೀಡಿತ ಸಂಶೋಧನೆ ಬೇಡ
ಪೂರ್ವಾಗ್ರಹಪೀಡಿತ ಸಂಶೋಧನೆ, ವೈಜ್ಞಾನಿಕ ಸಂಶೋಧನೆಗೆ ತುಂಬಾ ಅಪಾಯಕಾರಿಯಾದುದು. ಜ್ಞಾನ ಭಂಡಾರದ ಸಂಪತ್ತು ಹಸ್ತಪ್ರತಿಗಳಲ್ಲಿದೆ. ಇವುಗಳಲ್ಲಿ ವೇದ, ಪುರಾಣ, ಇತಿಹಾಸ, ಗಣಿತ, ಬೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಶಾಸ್ತ್ರ, ಸಸ್ಯಶಾಸ್ತ್ರ, ಲೋಹಶಾಸ್ತ್ರ, ಕಾವ್ಯ ಮುಂತಾದವು ಉಪಲಬ್ಧವಿವೆ ಎಂದು ಡಾ.ಗುಂಡಾ ಜೋಯಿಸ ಹೇಳಿದರು.
ಋಷಿಗಳ ವೈಜ್ಞಾನಿಕ ಜ್ಞಾನಭಂಡಾರಗಳನ್ನು ಪ್ರಶ್ನಿಸಲು ನಾವು ಅನರ್ಹರೆಂದೇ ಹೇಳಬಹುದು. ಪೂರ್ವಾಗ್ರಹಗಳಿಲ್ಲದ ಅವರ ಜ್ಞಾನವು ಜಗತ್ತಿನ ಶಾಂತಿಗೆ ಮೀಸಲಾಗಿದ್ದು, ಇವುಗಳನ್ನು ಪ್ರಾಚೀನ ಹಸ್ತಪ್ರತಿಗಳಲ್ಲಿ ಕಾಣಬಹುದು. ಇವುಗಳ ರಕ್ಷಣೆ ಹೊಣೆಗಾರಿಕೆ ನಮ್ಮ ಮೇಲಿದೆ ಎಂದವರು ನುಡಿದರು.








