ಮೆಸ್ಸಿಯ ಅಭಿಮಾನಿಗೆ ನೈಜ ಜರ್ಸಿ ರೆಡಿ ..!

ಕಾಬೂಲ್, ಫೆ.3: ಪ್ಲಾಸ್ಟಿಕ್ ಚೀಲದಿಂದ ತಯಾರಿಸಿದ ಜರ್ಸಿ ಧರಿಸಿ ವಿಶ್ವದ ಗಮನ ಸೆಳೆದಿದ್ದ ಅಫ್ಘಾನಿಸ್ತಾನದ ಐದರ ಹರೆಯದ ಪೋರ ಮೆಸ್ಸಿಯ ಅಭಿಮಾನಿ ಮುರ್ತಝಾ ಅಹ್ಮದಿಗೆ ನೀಡಲು ಮೆಸ್ಸಿಯ ನೈಜ ಜರ್ಸಿ ಬಾರ್ಸಿಲೋನಾದಲ್ಲಿ ತಯಾರಾಗಿದೆ. ಶೀಘ್ರದಲ್ಲೇ ಮೆಸ್ಸಿ ತನ್ನ ಅಭಿಮಾನಿ ಬಾಲಕನನ್ನು ಭೇಟಿಯಾಗಲಿದ್ದಾರೆ.
ಮೆಸ್ಸಿಯ ಪ್ರತಿನಿಧಿಗಳು ಬಾಲಕನಿಗೆ ನೀಡಲು ಮೆಸ್ಸಿಯ ಜರ್ಸಿ ತಯಾರಿಸಿದ್ದಾರೆ.ಕಿಟ್‌ನ್ನು ಶೀಘ್ರದಲ್ಲೇ ನೀಡಲಿದ್ದಾರೆ. ಮೆಸ್ಸಿ ಪ್ರತಿನಿಧಿಗಳು ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆಂದು ಅಫ್ಘಾನಿಸ್ತಾನದ ಫುಟ್ಬಾಲ್ ಫೆಡರೇಶನ್ ತಿಳಿಸಿದೆ.
ಕಾಬೂಲ್ ಸಮೀಪದ ಗಝ್ನಿಯ ಬಡ ಕುಟಂಬದ ಈ ಬಾಲಕ ಮುರ್ತಝಾ ಪ್ಲಾಸ್ಟಿಕ್ ಜರ್ಸಿ ಧರಿಸಿ ಆಡುವ ಫೋಟೊಗಳು ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಪ್ರಕಟಗೊಂಡಿತ್ತು. ಇದನ್ನು ನೋಡಿದ ಮೆಸ್ಸಿ ಅಭಿಮಾನಿಗಳು ಬಾಲಕನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದರು.
ಫುಟ್ಬಾಲ್ ಆಡುತ್ತಿರುವ ಈ ಬಾಲಕನಿಗೆ ಜರ್ಸಿ ಖರೀದಿಸಿ ಕೊಡಲು ಹೆತ್ತವರ ಕೈಯಲ್ಲಿ ಕಾಸಿಲ್ಲ. ಈ ಕಾರಣಕ್ಕಾಗಿ ಪ್ಲಾಸ್ಟಿಕ್ ಚೀಲದಿಂದ ತಯಾರಿಸಿದ ಜರ್ಸಿ ಧರಿಸಿ ಆಡುತ್ತಿದ್ದಾನೆ. ಜರ್ಸಿಯಲ್ಲಿ ತನ್ನ ನೆಚ್ಚಿನ ಆಟಗಾರ ‘ಮೆಸ್ಸಿ’ ಎಂದು ಬರೆಯಲಾಗಿತ್ತು.
ನೆರೆಮನೆಯವರು ಬಳಸಿ ಬಿಸಾಡಿದ ಪ್ಲಾಸಿಕ್ ಚೀಲವನ್ನು ಮುರ್ತಾಝಾಗೆ ಜರ್ಸಿ ಮಾಡಲಾಗಿತ್ತು.
ಮುರ್ತಝಾ ಅಣ್ಣ 15ರ ಹರೆಯದ ಹುಮಾಯೂನ್ ಅವರು ನೀಲಿ ಹಾಗೂ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಿಂದ ಜರ್ಸಿ ತಯಾರಿಸಿ ಅದರ ಮೇಲೆ ಮಾರ್ಕರ್ ಪೆನ್‌ನಲ್ಲಿ ಮೆಸ್ಸಿ ಎಂದು ಇಂಗ್ಲೀಷ್‌ನಲ್ಲಿ ಬರೆದು ತಮ್ಮನಿಗೆ ನೀಡಿದ್ದನು.





