ಸುಳ್ಯ ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಸುಳ್ಯ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ಸಮಯವಾದರೂ ಬೆಲೆಯೇರಿಕೆ ತಡೆಗಟ್ಟಲು ಸಾಧ್ಯವಾಗಿಲ್ಲ ಮಾತ್ರವಲ್ಲ, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಇದ್ದ ಬೆಲೆಗಿಂತ ಭಾರಿ ಬೆಲೆಯೇರಿಕೆ ಈಗ ಉಂಟಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ ಆದ ಬೆಲೆಯೇರಿಕೆಯ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆ ವಿಪರೀತವಾಗಿದ್ದು, ಕೃಷಿ ಉತ್ಪನ್ನಗಳ ಬೆಲೆ ಪಾತಾಳಕ್ಕಿಳಿದಿದೆ. ಚುನಾವಣಾ ಪೂರ್ವದಲ್ಲಿ ಇದನ್ನೇ ಚುನಾವಣಾ ವಿಷಯವನ್ನಾಗಿ ಮಾಡಿ ಅಚ್ಚೇ ದಿನ್ ಬರುತ್ತದೆ ಎಂದು ನಂಬಿಸಿ ಗೆಲುವು ಸಾಧಿಸಿದ ಬಿಜೆಪಿ ಇದನ್ನು ಅಚ್ಚೇ ದಿನ್ ಎಂದು ಹೇಳುತ್ತದೆಯೇ ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರ ಇರುವಾಗ ರಬ್ಬರ್ ಬೆಲೆ 248ರವರೆಗೆ ಏರಿತ್ತು. ಆದರೆ ಈಗ ರೂ.95ರವರೆಗೆ ಇಳಿದಿದೆ. ಇಂತಹ ಮೋದಿ ಸರಕಾರದಿಂದ ರೈತಾಪಿ ವರ್ಗವನ್ನು ರಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ವೆಂಕಪ್ಪ ಗೌಡರು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಕೆಯಾದರೂ ಕೇಂದ್ರ ಸರಕಾರ ಹಲವು ತೆರಿಗೆಗಳ ಹೆಸರಲ್ಲಿ ಬೆಲೆಯನ್ನು ಅಧಿಕಗೊಳಿಸಿದರು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕಾಂಗ್ರೆಸ್ ನಾಯಕರಾದ ಕೆ.ಎಂ.ಮುಸ್ತಫ, ಪಿ.ಎ.ಮಹಮ್ಮದ್, ಅಶೋಕ್ ಚೂಂತಾರು, ಸತ್ಯಕುಮಾರ್ ಆಡಿಂಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





