ಬೆಂಗಳೂರು;ಇನ್ವೆಸ್ಟ್ ಕರ್ನಾಟಕ, ಕೈಗಾರಿಕೋದ್ಯಮಿಗಳಿಂದ ಭಾರೀ ಮೆಚ್ಚುಗೆ
ಬೆಂಗಳೂರು.ಫೆ.3: ಕರ್ನಾಟಕ ಹೂಡಿಕೆದಾರರ ಸ್ವರ್ಗವಾಗಿದ್ದು, ಹೂಡಿಕೆಗೆ ಯೋಗ್ಯ ಸ್ಥಳವಾಗಿದೆ ಎಂದು ದೇಶ ವಿದೇಶಗಳ ಕೈಗಾರಿಕೋದ್ಯಮಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭವಾದ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ 2016ರ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಉದ್ಯಮಿಗಳು ರಾಜ್ಯದ ವಿಭಿನ್ನ ಭೌಗೋಳಿಕ ಪರಿಸ್ಥಿತಿ, ಶ್ರೀಮಂತ ಮಾನವ ಸಂಪನ್ಮೂಲ, ಶಿಕ್ಷಣ ವ್ಯವಸ್ಥೆ, ಉದಾರಿಗಳಾದ ರಾಜ್ಯದ ಜನತೆಯನ್ನು ಕೊಂಡಾಡಿದರು. ಖ್ಯಾತ ಉದ್ಯಮಿ ರತನ್ ಟಾಟಾ ಮಾತನಾಡಿ, ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ಸೂಕ್ತ ವಾತಾವರಣವಿದೆ. ಮಾಹಿತಿ ತಂತ್ರಜ್ಞಾನ, ಜೈವಿನ ತಂತ್ರಜ್ಞಾನವಷ್ಟೇ ಅಲ್ಲದೇ ಎಲೆಕ್ಟ್ರಾನಿಕ್ ವಲಯದಲ್ಲಿ ಉತ್ತಮ ಅವಕಾಶಗಳಿವೆ.
ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ಪೋಸಿಸ್ ಮುಖ್ಯಸ್ಥ ಎನ್.ಆರ್. ನಾರಾಯಣ ಮೂರ್ತಿ, ಕರ್ನಾಟಕದ ಯುವಕರು ಅತ್ಯಂತ ಪ್ರತಿಭಾವಂತರಾಗಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಇನ್ಪೋಸಿಸ್ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಹುಬ್ಬಳ್ಳಿಯಲ್ಲಿ ನಾಲ್ಕನೇ ಶಾಖೆ ಆರಂಭಿಸಲಾಗುತ್ತಿದೆ. ಐಟಿ ಉದ್ಯಮ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಶೇ 38 ರಷ್ಟು ಕೊಡುಗೆ ನೀಡುತ್ತಿದ್ದು, ಉದ್ಯಮದ ಬೆಳವಣಿಗೆಗೆ ಮತ್ತಷ್ಟು ಸಹಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಐಟಿ ದಿಗ್ಗಜ ಅಜೀಂ ಪ್ರೇಮ್‌ಜಿ, ಕರ್ನಾಟಕ ಆತಿಥ್ಯಕ್ಕೆ ಹೆಸರಾಗಿದೆ. ಬೆಂಗಳೂರಿನಲ್ಲಿ ಮೂಲಭೂತ ಸಮಸ್ಯೆಗಳ ಕೊರತೆ ಇದ್ದರೂ ಇಲ್ಲಿನ ವಾತಾವರಣ ಉತ್ತಮವಾಗಿದೆ. ಕಾಸ್ಮೋಪಾಲಿಟಿನ್ ನಗರವಾಗಿರುವ ಬೆಂಗಳೂರು ಉದ್ಯಮಿಗಳಿಗೆ ಪ್ರೀತಿ ಪಾತ್ರವಾಗಿದೆ ಎಂದರು. ಬಿರ್ಲಾ ಸಮೂಹದ ಕುಮಾರ ಮಂಗಳಂ ಬಿರ್ಲಾ, ಕಳೆದ 1990ರ ದಶಕದಿಂದಲೂ ಕರ್ನಾಟಕದಲ್ಲಿ ಹೂಡಿಕೆ ಮಾಡುತ್ತಿದ್ದೇವೆ.
ಇತ್ತೀಚೆಗೆ ಹರಿಹರ ಬಳಿ ಒಂದು ಸಾವಿರ ಕೋಟಿ ರೂ ಅಂದಾಜು ವೆಚ್ಚದ ಸಿಮೆಂಟ್ ಉದ್ದಿಮೆ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು. ರಿಲಯನ್ಸ್ ಸಂಸ್ಥೆಯ ಅನಿಲ್ ಅಂಬಾನಿ ಮಾತನಾಡಿ, ವೈಟ್ ಫೀಲ್ಡ್ ಬಳಿ ಧೀರೂ ಭಾಯ್ ಅಂಬಾನಿ ಹೆಸರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಾರಂಭಿಸಲಾಗುತ್ತಿದೆ. ಇದರಿಂದ 1500 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಸಂಶೋಧನಾ ಇಂಜಿನಿರ್‌ಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ರಕ್ಷಣಾ ವಲಯದಲ್ಲಿ ಒಟ್ಟಾರೆ ಒಟ್ಟು ಐದು ಸಾವಿರ ಕೋಟಿ ರೂ ಹೂಡಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಜಿಂದಾಲ್ ಸಮೂಹದ ಸಜ್ಜನ್ ಜಿಂದಲ್ ಮಾತನಾಡಿ, ಕಳೆದ ಎರಡು ದಶಕಗಳಿಂದ ಹೂಡಿಕೆ ಮಾಡುತ್ತಿದ್ದು, ರಾಜ್ಯದಲ್ಲಿ ಕೈಗಾರಿಕಾ ವಾತಾವರಣ ಬದಲಾಗಿಲ್ಲ. ಈವರೆಗೆ 60 ಸಾವಿರ ಕೋಟಿ ರೂ ಹೂಡಿಕೆ ಮಾಡುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ 35 ಸಾವಿರ ಕೋಟಿ ರೂ ಹೂಡಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಅದಾನಿ ಗ್ರೂಪ್‌ನ ಗೌತಮ್ ಅದಾನಿ, ಉಡುಪಿ ವಿದ್ಯುತ್ ಯೋಜನೆಗೆ 1600 ಕೋಟಿ ರೂ ಹೂಡಿಕೆ ಮಾಡಲಾಗುತ್ತಿದೆ. ಜತೆಗೆ ಒಂದು ಸಾವಿರ ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲು 7 ಸಾವಿರ ಕೋಟಿ ರೂ, ಹೂಡಿಕೆ ಮಾಡಲಾಗುವುದು. ತದಡಿ ಬಂದರು ಅಭಿವೃದ್ಧಿಗೆ ಎರಡು ಸಾವಿರ ಕೋಟಿ ರೂ ಹೂಡಲು ಉದ್ದೇಶಿಸಲಾಗಿದೆ ಎಂದರು. ಕೋಟಕ್ ಮಹಿಂದ್ರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ್ ಕೊಠಕ್, ಸೀತಾರಾಂ ಜಿಂದಾಲ್, ಮಣಿಪಾಲ್ ಗ್ಲೋಬಲ್‌ನ ಮೋಹನ್ ದಾಸ್ ಪೈ, ಸಿಸ್ಕೋ ಇಂಡಿಯಾ ಅಧ್ಯಕ್ಷ ದಿನೇಶ್ ಮಲ್ಕಾನಿ ಮತ್ತಿತರರು ರಾಜ್ಯದಲ್ಲಿ ಹೂಡಿಕೆ ಮಾಡಲು ಇರುವ ಸಕಾರಾತ್ಮಕ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು.







