ಏಷ್ಯಾಕಪ್, ಟ್ವೆಂಟಿ-20 ವಿಶ್ವಕಪ್‌ಗೆ ಫೆ.5 ರಂದು ಟೀಮ್ ಇಂಡಿಯಾ ಆಯ್ಕೆ

ಮುಂಬೈ, ಫೆ.3: ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾಕಪ್ ಟ್ವೆಂಟಿ-20 ಟೂರ್ನಮೆಂಟ್ ಹಾಗೂ ಭಾರತದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಸಂದೀಪ್ ಪಾಟೀಲ್ ಅಧ್ಯಕ್ಷತೆಯ ರಾಷ್ಟ್ರೀಯ ಆಯ್ಕೆ ಸಮಿತಿ ಫೆ.5 ರಂದು ದಿಲ್ಲಿಯಲ್ಲಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದೆ.
ಏಷ್ಯಾಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್ ಟೂರ್ನಿಗಳಿಗೆ ತಂಡಗಳನ್ನು ಆಯ್ಕೆ ಮಾಡಲು ಫೆ.5 ರಂದು ದಿಲ್ಲಿಯಲ್ಲಿ ಸಭೆ ನಡೆಯಲಿದೆ ಎಂದು ಕ್ರಿಕೆಟ್ ಮಂಡಳಿ ಮೂಲಗಳು ಪಿಟಿಐಗೆ ಬುಧವಾರ ತಿಳಿಸಿವೆ.
ಭಾರತ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಮೊದಲು ಫೆ.9 ರಿಂದ ಶ್ರೀಲಂಕಾದ ವಿರುದ್ಧ ಸ್ವದೇಶದಲ್ಲಿ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲಿದೆ. ಏಷ್ಯಾಕಪ್ ಫೆ.24 ರಿಂದ ಮಾ.6ರ ತನಕ ಬಾಂಗ್ಲಾದೇಶದಲ್ಲಿ ನಡೆಯುವುದು. ಮೀರ್ಪುರದಲ್ಲಿ ನಡೆಯಲಿರುವ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದೆ. ಫೆ.27 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು, ಮಾ.1 ರಂದು ಶ್ರೀಲಂಕಾ ಹಾಗೂ ಮಾ.3 ರಂದು ಅರ್ಹತಾ ಸುತ್ತಿನಲ್ಲಿ ವಿಜೇತವಾಗುವ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಈ ಬಾರಿ ಇದೇ ಮೊದಲ ಬಾರಿ 50 ಓವರ್‌ಗಳ ಬದಲಿಗೆ ಟ್ವೆಂಟಿ-20 ಮಾದರಿಯಲ್ಲಿ ನಡೆಯಲಿದೆ. ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್ ಮಾ.8 ರಿಂದ ಆರಂಭವಾಗಲಿದೆ. ಸೂಪರ್ 10 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಭಾರತ ಮಾ.15 ರಂದು ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಆಡಲಿದೆ.





