‘ನ್ಯೂಯಾರ್ಕ್ ಟೈಮ್ಸ್’ ಅಣಕಿಸಲು ಪ್ರತಿ ‘ನ್ಯೂಯಾರ್ಕ್ ಟೈಮ್ಸ್’!

ಪತ್ರಿಕೆಯ ಫೆಲೆಸ್ತೀನ್ ವಿರೋಧಿ ನಿಲುವಿಗೆ ಪ್ರಗತಿಪರ ಯಹೂದಿಯರಿಂದಲೇ ಟೀಕೆ
ನ್ಯೂಯಾರ್ಕ್, ಫೆ. 3: ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಪಕ್ಷಪಾತಪೂರಿತ ವರದಿಗಾರಿಕೆಯನ್ನು ನೋಡಿ ಬೇಸತ್ತ ಪ್ರಗತಿಪರ ಯಹೂದಿ ಗುಂಪುಗಳು ಪತ್ರಿಕೆಯನ್ನು ಅಣಕಿಸುವುದಕ್ಕಾಗಿ ನಕಲಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯೊಂದನ್ನು ಮುದ್ರಿಸಿವೆ.
ನಕಲಿ ‘ನ್ಯೂಯಾರ್ಕ್ ಟೈಮ್ಸ್’ನ ಒಂದು ಸುದ್ದಿ ಹೀಗಿದೆ: ‘‘ಇಸ್ರೇಲ್‌ಗೆ ಅಮೆರಿಕದ ನೆರವು ಬಗ್ಗೆ ಚರ್ಚಿಸಲಿರುವ ಕಾಂಗ್ರೆಸ್’’.
ಅಣಕು ಪತ್ರಿಕೆಯನ್ನು ಎಡಪಂಥೀಯ ದೃಷ್ಟಿಕೋನದಿಂದ, ಜನಾಂಗೀಯತೆ ವಿರೋಧಿ ನಿಲುವಿನಿಂದ ಹಾಗೂ ಇಸ್ಲಾಂ-ಭೀತಿಯನ್ನು ಬದಿಗಿಟ್ಟು ಸಿದ್ಧಪಡಿಸಲಾಗಿದೆ. ಇದನ್ನು ಸಿದ್ಧಪಡಿಸಿದ ಗುಂಪು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಮಾನವಹಕ್ಕುಗಳ ಉಲ್ಲಂಘನೆಗಾಗಿ ಇಸ್ರೇಲನ್ನು ಟೀಕಿಸಿವೆ ಹಾಗೂ, ಅದೇ ವೇಳೆ, ಈ ವಿಷಯಗಳನ್ನು ಸರಿಯಾಗಿ ನಿಭಾಯಿಸದ ಪತ್ರಿಕೆಯ ವೈಫಲ್ಯವನ್ನೂ ಖಂಡಿಸಿವೆ.
ಮಂಗಳವಾರ ಬೆಳಗ್ಗೆ, ಪ್ರಗತಿಪರ ಯಹೂದಿ ಕಾರ್ಯಕರ್ತರು ‘ದ ನ್ಯೂಯಾರ್ಕ್ ಟೈಮ್ಸ್’ ಹೆಸರಿನಲ್ಲಿ ದೇಶಾದ್ಯಂತದ ವರದಿಗಾರರಿಗೆ ಇಮೇಲೊಂದನ್ನು ಕಳುಹಿಸಿದರು. ವಿಷಯ ಹೀಗಿತ್ತು: ‘‘ನ್ಯೂಯಾರ್ಕ್ ಟೈಮ್ಸ್‌ನಿಂದ ನೂತನ ಸಂಪಾದಕೀಯ ನೀತಿ ಘೋಷಣೆ: ಇಸ್ರೇಲ್-ಫೆಲೆಸ್ತೀನ್‌ನ ನಮ್ಮ ವರದಿಗಾರಿಕೆಯ ಮರುಪರಿಶೀಲನೆ’’. ಇಮೇಲ್‌ನಲ್ಲಿ ‘ನ್ಯೂಯಾರ್ಕ್ ಟೈಮ್ಸ್’ನ ವೆಬ್‌ಸೈಟನ್ನೇ ಹೋಲುವ ವೆಬ್‌ಸೈಟೊಂದಕ್ಕೆ ಸಂಪರ್ಕ ಕೊಡಲಾಗಿತ್ತು. ಈ ವೆಬ್‌ಸೈಟನ್ನು ಕಾರ್ಯಕರ್ತರು ಸೃಷ್ಟಿಸಿದ್ದರು.
ವೆಬ್‌ಸೈಟ್‌ನ ಬಗ್ಗೆ ಪ್ರಚಾರ ನೀಡಿದ 24 ಗಂಟೆಗಳ ಒಳಗೆ ಅಂದರೆ ಮಂಗಳವಾರ ಸಂಜೆಯ ಹೊತ್ತಿಗೆ ಅದನ್ನು ಇಂಟರ್‌ನೆಟ್‌ನಿಂದ ತೆಗೆದುಹಾಕಲಾಗಿತ್ತು.
ಇದನ್ನು ಮಾಡಿದ್ದು ತಾವೆಂದು ಯಾವುದೇ ಗುಂಪು ಹೇಳಿಕೊಂಡಿಲ್ಲ. ಆದರೆ, ಇದರ ಹಿಂದೆ ‘ಜ್ಯೂಯಿಶ್ ವಾಯ್ಸ ಫಾರ್ ಪೀಸ್ (ಜೆವಿಪಿ)’ ಮತ್ತು ‘ನ್ಯೂಯಾರ್ಕ್ ಆ್ಯಂಡ್ ಜ್ಯೂಸ್ ಸೇ ನೋ’ ಎಂಬ ಗುಂಪುಗಳು ಈ ವಿನೂತನ ಪ್ರತಿಭಟನೆಯನ್ನು ನಡೆಸಿವೆ ಎಂದು ಹೇಳಲಾಗಿದೆ.
ಮೂಲನಿವಾಸಿ ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಬ್ಬಾಳಿಕೆ ಮತ್ತು ಹಿಂಸಾಚಾರವನ್ನು ಅಮೆರಿಕದ ಮಾನವಹಕ್ಕುಗಳ ಸಂಘಟನೆಯಾಗಿರುವ ಜೆವಿಪಿ ಹಿಂದಿನಿಂದಲೂ ಖಂಡಿಸುತ್ತಾ ಬಂದಿದೆ.
‘ಜ್ಯೂಸ್ ಸೇ ನೋ’ ಎನ್ನುವುದು ನ್ಯೂಯಾರ್ಕ್‌ನಲ್ಲಿರುವ ಶಾಂತಿ ಬಯಸುವ ಸಂಘಟನೆಯಾಗಿದ್ದು, 48 ವರ್ಷಗಳಿಂದ ಇಸ್ರೇಲ್ ಫೆಲೆಸ್ತೀನ್ ನೆಲದ ಮೇಲೆ ನಡೆಸುತ್ತಿರುವ ಅತಿಕ್ರಮಣವನ್ನು ಹಾಗೂ ಗಾಝಾದ ಮೇಲೆ ಆಗಾಗ ನಡೆಸುತ್ತಿರುವ ಬಾಂಬ್ ದಾಳಿಯನ್ನು ಖಂಡಿಸುತ್ತದೆ.







