ಹೊಸದಿಲ್ಲಿ;ಗುಜರಾತ್ ಭಯೋತ್ಪಾದನಾ ಮಸೂದೆ ಹಿಂಪಡೆಯಲು ಪಿಎಫ್‌ಐ ಆಗ್ರಹ.
ಹೊಸದಿಲ್ಲಿ: ಗುಜರಾತ್ ಸರಕಾರವು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದನಾ ನಿಯಂತ್ರಣ ಮತ್ತು ಸಂಘಟಿತ ಅಪರಾಧಗಳ ತಡೆ ಮಸೂದೆಯನ್ನು ಹಿಂಪಡೆಯಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸೆಕ್ರೆಟೆರಿಯೇಟ್ ಒತ್ತಾಯಿಸಿದೆ. ಇದು ಈಗಾಗಲೆ ದೇಶದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿರುವ ಯುಎಪಿಎ ಮತ್ತು ಎಎಫ್‌ಎಸ್‌ಪಿಎ ಗಳಂತಹ ಕರಾಳ ಕಾನೂನಿನ ಇನ್ನೊಂದು ಮುಖವಾಗಿದೆ ಎಂದು ಸಭೆಯು ತಿಳಿಸಿದೆ.
ಪೋಟಾ, ಟಾಡಾದಂತಹ ಕಾನೂನು ಈ ಹಿಂದೆ ಹಲವಾರು ರಾಜಕೀಯ ಎದುರಾಳಿಗಳನ್ನು ಮಣಿಸಲು ಬಳಕೆಯಾಗಿದ್ದು, ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆ ಎಂಬುದನ್ನು ಈಗಾಗಲೇ ನೋಡಿದ್ದೇವೆ. ದೊಡ್ಡ ಮಟ್ಟದ ಜನಾಕ್ರೋಶಕ್ಕೆ ಕಾರಣವಾಗಿ ಈ ಕಾನೂನುಗಳನ್ನು ಹಿಂಪಡೆಯಲಾಯಿತಾದರೂ ಯುಎಪಿಎ ಯಂತಹ ಇನ್ನೊಂದು ಕರಾಳ ಕಾನೂನು ಅದರ ಸ್ಥಾನವನ್ನು ತುಂಬಿದ್ದು ದುರಂತ. ಯುಎಪಿಎಯ ಕರಾಳ ವಿಧಿಗಳ ಕಾರಣದಿಂದಲೇ ಸಾವಿರಾರು ನಿರಪರಾಧಿಗಳು ಈಗಲೂ ಕೊಳೆಯುತ್ತಿದ್ದಾರೆ. ಯಾವ ರಾಜ್ಯಗಳಲ್ಲಿ ಎಎಫ್‌ಎಸ್‌ಪಿಎ ಜಾರಿಯಲ್ಲಿದೆಯೋ ಅಲ್ಲೆಲ್ಲ ಜನಸಾಮಾನ್ಯರ ಜೀವನ ಕತ್ತಲೆಯಲ್ಲಿದೆ ಎಂದು ಚೆಯರ್‌ಮೆನ್ ಕೆ.ಎ.ಶರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದೆ.
ಗುಜರಾತ್ ಭಯೋತ್ಪಾದನಾ ನಿಯಂತ್ರಣ ಮತ್ತು ಸಂಘಟಿತ ಅಪರಾಧಗಳ ತಡೆ ಮಸೂದೆಯು (ಜಿಸಿಟಿಒಸಿ) ತನಿಖಾ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲಿದ್ದು, ಖಾಸಗಿ ಸಂಭಾಷಣೆಗಳಲ್ಲಿಯೂ ಕೂಡ ಮಧ್ಯಪ್ರವೇಶಿಸಲು ಅವಕಾಶವಿದೆ. ಕರಾಳತೆಯ ವಿಧಿಗಳು ಅದರಲ್ಲಿರುವ ಕಾರಣದಿಂದಲೇ ಯುಪಿಎ ಸರಕಾರವು ಅದನ್ನು 3 ಬಾರಿ ತಿರಸ್ಕರಿಸಿದೆ. ರಾಷ್ಟ್ರಪತಿಗಳ ಒಪ್ಪಿಗೆಗೆ ಕಾಯುತ್ತಿರುವ ಈ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯವು ಮರುಪರಿಶೀಲಿಸಿದೆ. ಗುಜರಾತ್ ಸರಕಾರದ ಈ ಮಸೂದೆಯನ್ನು ಹಿಂಪಡೆಯಲು ರಾಷ್ಟ್ರೀಯ ಸೆಕ್ರೆಟೆರಿಯೇಟ್ ಆಗ್ರಹಿಸಿದೆ ಎಂದು ಪಿಎಫ್‌ಐನ ಪ್ರಕಟನೆ ತಿಳಿಸಿದೆ.





