ಮಂಗಳೂರು : ಕೊಲೆಗೆ ಸಂಚು - ಐವರ ಬಂಧನ , ಮಾರಕಾಸ್ತ್ರಗಳು ವಶಕ್ಕೆ

ಮಂಗಳೂರು, ಫೆ. 3: ನಗರದ ಅಡ್ಯಾರಿನ ಅಡ್ಯಾರು ಕಡವಿನ ಬಳಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸಿದ್ದ ಆರೋಪದಡಿ 5 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ವಾಹನದ ಸಹಿತ ಮಾರಕಾಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಡ್ಯಾರುಕಟ್ಟೆಯ ಝಿಯಾ ಅಲಿಯಾಸ್ ಎ.ಕೆ. ರಿಯಾಝ್(30), ಕಣ್ಣೂರು ಬಲ್ಲೂರುಗುಡ್ಡೆಯ ಅಜ್ಮಲ್ ಯಾನೆ ಅಜ್ಜು (22), ಕಣ್ಣೂರು, ಯೂಸುಫ್ ನಗರದ ಮುಷ್ತಾಕ್ ಅಹ್ಮದ್(21), ಕಣ್ಣೂರು ಅಮ್ಮೆಮಾರುವಿನ ಮುಹಮ್ಮದ್ ಫಝಲ್ (21) ಹಾಗೂ ಪಾಂಡೇಶ್ವರ ಶಾದಿಮಹಲ್ ಸಮೀಪದ ಬಾಸಿತ್(21) ಬಂಧಿತ ಆರೋಪಿಗಳಾಗಿದ್ದಾರೆ.





ಆರೋಪಿಗಳು ಹಲವು ಠಾಣೆಗಳಲ್ಲಿ ಕೊಲೆ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗಿದೆ. ಆರೋಪಿಗಳಿಂದ ಮಾರುತಿ ಓಮ್ನಿ ವಾಹನ, 3 ತಲವಾರುಗಳು, 2 ಚೂರಿ ಹಾಗೂ 7 ಮೊಬೈಲ್ ಫೋನ್‌ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಕಡವಿನ ಬಳಿ ಸಿಲ್ವರ್ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ವ್ಯಕ್ತಿಯೋರ್ವನ ಕೊಲೆಗೆ ಹಾಗೂ ದರೋಡೆ ಮಾಡುವ ಸಂಚು ರೂಪಿಸಿಕೊಂಡು ದುಷ್ಕೃತ್ಯಕ್ಕೆ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ನಿರೀಕ್ಷಕ ವೆಲೆಂಟೈನ್ ಡಿ ಸೋಜಾ ಮತುತಿ ಸಿಬ್ಬಂದಿು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳೆಲ್ಲರೂ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಝಿಯಾ ಅಲಿಯಾಸ್ ಎ.ಕೆ ರಿಯಾಝ್ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಣ್ಣೂರಿನಲ್ಲಿ 2014 ರಲ್ಲಿ ಇಜಾಝ್ ಎಂಬಾತನ ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಈತ ತಿಂಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದನು. ಅಜ್ಮಲ್ ಯಾನೆ ಅಜ್ಜು ಗ್ರಾಮಾಂತರ ಠಾಣೆಯಲ್ಲಿ ದರೋಡೆ ಪ್ರಕರಣ, ಇಜಾಝ್ ಎಂಬಾತನ ಕೊಲೆ ಪ್ರಕರಣ, ಬಂಟ್ವಾಳ ನಗರ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ. ಮುಷ್ತಾಕ್ ಅಹ್ಮದ್ ಹಾಗೂ ಮುಹಮ್ಮದ್ ಫಝಲ್ ಎಂಬವರು ಇಜಾಝ್ ಎಂಬಾತನ ಕೊಲೆ ಯತ್ನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಮತ್ತೋರ್ವ ಆರೋಪಿ ಬಾಸಿತ್ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾನೆ.
ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ಎಂ. ಶಾಂತರಾಜು, ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಡಾ. ಸಂಜೀವ್ ಎಂ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್‌ಐ ಶ್ಯಾಮ್ ಸುಂದರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ಗ್ರಾಮಾಂತರ ಠಾಣೆಗೆ ಪ್ರಕರಣ ಹಸ್ತಾಂತರಿಸಲಾಗಿದೆ.







