ಕಾನೂನಿನಿಂದ ಮೂಢನಂಬಿಕೆನ್ನು ನಿಷೇಧಿಸಲು ಸಾಧ್ಯವೇ?

ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್, ಇತ್ತೀಚೆಗೆ ಲೋಕ ಕಲ್ಯಾಣಾರ್ಥ ನಡೆಸಿದ ಏಳು ಕೋಟಿ ರೂ. ವೆಚ್ಚದ ಮಹಾಯಾಗ, ವೌಢ್ಯ- ಮೂಢ ನಂಬಿಕೆ ಆಚರಣೆಗಳನ್ನು ಪ್ರಶ್ನಿಸಿ ಇನ್ನೊಮ್ಮೆ ಚರ್ಚೆಯನ್ನು ಹುಟ್ಟು ಹಾಕಿದೆ. ಹಾಗೆಯೇ ಇದನ್ನು ನಿಷೇಧಿಸಬೇಕೆನ್ನುವ ಕೂಗನ್ನು ಸ್ವಲ್ಪ ಜೋರಾಗಿಸಿದೆ. ಪ್ರತಿವರ್ಷ ಈ ಕೂಗು ಮಡೆ ಸ್ನಾನ ಮತ್ತು ಎಡೆ ಸ್ನಾನದ ಸಮಯದಲ್ಲಿ ಕೇಳಿಬರುತ್ತಿದ್ದು, ತೆಲಂಗಾಣ ಮುಖ್ಯಮಂತ್ರಿಗಳ ಮಹಾಯಾಗ, ನಿಷೇಧದ ಕೂಗು ಸ್ವಲ್ಪಉಚ್ಚ ಸ್ತರದಲ್ಲಿ ಕೇಳಿಸುವಂತೆ ಮಾಡಿದೆ.
ಯಾವುದು ಮೂಢ ನಂಬಿಕೆ ಅಥವಾ ವೌಢ್ಯ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದು ನೋಡುವವರ ದೃಷ್ಟಿಯಲ್ಲಿ, ಅವರ ಚಿಂತನೆಯಲ್ಲಿ ಮತ್ತು ಅವರ ಸೈದ್ಧಾಂತಿಕ ವೈಚಾರಿಕತೆಯ ನಿಲುವಿನಲ್ಲಿ ಅಡಕವಾಗಿರುತ್ತದೆ. ಇದು ಭಕ್ತರು ತಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು, ತಮ್ಮ ದೇವರನ್ನು ಪ್ರಾರ್ಥಿಸುವ ತಲೆ-ತಲಾಂತರಗಳಿಂದ ನಡೆದು ಬಂದ ವಿಧಿ ವಿಧಾನ ಅಥವಾ ಪದ್ದತಿ.ಇದು ನಿನ್ನೆ ಮೊನ್ನೆ ದಿಢೀರ್ ಎಂದು ಕಾಣಿಸಿಕೊಂಡ ಪೂಜಾ ಅಥವಾ ಪ್ರಾರ್ಥನಾ ಕ್ರಮವಲ್ಲ. ಅದನ್ನು ಸರಿ ಅಥವಾ ತಪ್ಪು ಎಂದು ಮೂರನೆಯವರು, ಮುಖ್ಯವಾಗಿ ಈ ನಿಟ್ಟಿನಲ್ಲಿ ಪೂರ್ವಗ್ರಹ ಪೀಡಿತ ಚಿಂತನೆ ಉಳ್ಳವರು ನಿರ್ಧರಿಸದೇ ಮುಕ್ತ ಮನಸ್ಸಿನವರು ನಿಧರ್ರಿಸಬೇಕು. ಈ ಅಚರಣೆಯ ವಿರುದ್ಧದ ಕೂಗು, ಒಬ್ಬರ ವೈಯಕ್ತಿಕ ಪೂಜಾ ಮತ್ತು ದೇವರ ಸೇವೆಯ ಸ್ವಾತಂತ್ರವನ್ನು ಹರಣಮಾಡಿದಂತೆ ಎನ್ನುವ ಅಭಿಪ್ರಾಯವೂ ಇದೆ. ಒಬ್ಬರ ಅಹಾರ ಇನ್ನೊಬ್ಬರಿಗೆ ವಿಷವಾದಂತೆ, ಒಬ್ಬರ ನಂಬಿಕೆ ಮತ್ತು ಅಚರಣೆಯ ವಿಧಾನ ಇನ್ನೊಬ್ಬರಿಗೆ ಅಪಥ್ಯವಾಗುವುದು, ವೌಢ್ಯ-ಮೂಢ ನಂಬಿಕೆಯಾಗಿ ಕಾಣುವುದು ಸಹಜ. ತಲೆ ತಲಾಂತರದಿಂದ ನಂಬಿ, ನಡೆಸಿಕೊಂಡು ಬಂದಿರುವ ಅಚಾರ ವಿಚಾರಗಳನ್ನು ಮತ್ತು ಪದ್ಧತಿಗಳನ್ನು ಮತ್ತು ಇವುಗಳಿಂದ ತಮಗೆ ನೆಮ್ಮದಿಯಾಗಿದೆ, ಅದರಿಂದ ನಾವು ಸಂತೃಪ್ತರಾಗಿದ್ದೇವೆ ಎಂದು ಹೇಳುವವರು ಇರುವಾಗ, ಯಾರನ್ನೋ ಸಂತೈಸಲು,ಯಾವುದೋ ‘ಇಸಂಗ’ಳನ್ನು ಉತ್ತೇಜಿಸಲು, ಇವುಗಳನ್ನು ಮೌಢ್ಯಗಳೆಂದು ವರ್ಗೀಕರಿಸಿ ಮತ್ತು ನಿಷೇಧಿಸಿ ಪ್ರವಾಹದ ವಿರುದ್ಧ ಈಜುವುದನ್ನು ಹುಚ್ಚು ಸಾಹಸ ಎನ್ನಬಹುದು. ಹಾಗೆಯೇ ಇದನ್ನು ನಮ್ಮ ಸಂವಿಧಾನ ನೀಡಿದ ವೈಯಕ್ತಿಕ ಸ್ವಾತಂತ್ರ್ಯವನ್ನು ಹಿಂದಿನ ಬಾಗಿಲಿನಿಂದ ಕಸಿದು ಕೊಳ್ಳುವ ಯತ್ನವೆಂದೂ ಕೆಲವರು ವ್ಯಾಖ್ಯಾನಿಸಬಹುದು.ಅದಕ್ಕೂ ಮಿಗಿಲಾಗಿ ಇದು ಅತಿ ಭಾವನಾತ್ಮಕ ಮತ್ತು ಸೂಕ್ಷ್ಮ ವಿಷಯವಾಗಿದ್ದು, ಇನ್ನೊಬ್ಬರ ಪ್ರೇರಣೆಯಿಂದ ಬರುವುದಿಲ್ಲ. ಇದು ಒಂದು ರೀತಿ ಪರಂಪರಾಗತವಾಗಿ, ಸ್ವಪ್ರೇರಣೆಯಿಂದ ಮತ್ತು ಇನ್ನೊಬ್ಬರನ್ನು ನೋಡಿ ಬರುತ್ತಿದ್ದು, ಪರಂಪರೆಯ ಕೊಂಡಿಯನ್ನು ಕಳಚುವುದು ಸುಲಭವಲ್ಲ. ಇದರ ಅಚರಣೆ ಸರ್ವಾಂತರ್ಯಾಮಿಯಾಗಿದ್ದು, ಇದಕ್ಕೆ ಜಾತಿ, ಮತ, ಪಂಥ, ಧರ್ಮ, ಭಾಷೆ ಮತ್ತು ಅಂತಸ್ತಿನ ಗೋಡೆ ಇರುವುದಿಲ್ಲ.ಅದರೆ,ಕೆಲವರು ಇದನ್ನು ಒಂದು ನಿರ್ದಿಷ್ಟ ಧರ್ಮ ಮತ್ತು ಜಾತಿಗೆ ಸೀಮಿತಗೊಳಿಸಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರೆಕ್ಕೆ ಪುಕ್ಕ ಕೊಡುತ್ತಾರೆ. ಇದನ್ನು ಕೆಲವರು ಸಮಾಜದ ಕೆಳವರ್ಗದವರನ್ನು ಶೋಷಿಸಲು ಮೇಲ್ವರ್ಗದವರು,ಮುಖ್ಯವಾಗಿ ಬ್ರಾಹ್ಮಣರು ಮತ್ತು ಪುರೋಹಿತಶಾಹಿಗಳು ಉಪಯೋಗಿಸಿಕೊಳ್ಳುತ್ತಾರೆ ಎಂದು ಹುಯಿಲೆಬ್ಬಿಸುತ್ತಾರೆ. ಇದನ್ನು ಪುರೋಹಿತ ಶಾಹಿ ಮತ್ತು ಬ್ರಾಹ್ಮಣ ಶಾಹಿ ಧ್ಯೋತಕ ಮತ್ತು ಕೆಳವರ್ಗದವರನ್ನು ಶೋಷಿಸುವ ಇನ್ನೊಂದು ರೂಪಕ ಎಂದೂ ಬಿಂಬಿಸುತ್ತಾರೆ.
ವೌಢ್ಯ ಮತ್ತು ಮೂಢ ನಂಬಿಕೆಗಳಿಗೆ ವೈಜ್ಞಾನಿಕ ತಳಹದಿ ಇಲ್ಲ ಎನ್ನುವುದು ಚರ್ಚಾಸ್ಪದ ವಿಷಯ. ಪ್ರತಿಯೊಂದು ಪ್ರಕ್ರಿಯೆಯೂ ವೈಜ್ಞಾನಿಕ ಮೂಸೆಯಿಂದ ಹೊರಗೆ ಬಂದರಷ್ಟೇ ಸತ್ಯ ಎನ್ನಲಾಗದು. ವಿಜ್ಞಾನದ ಹೊರಗೂ ಚಿಂತನೆ ಮತ್ತು ಜಗತ್ತು ಇದೆ. ಇದು ಸರಿ ಅಥವಾ ತಪ್ಪು ಎನ್ನುವುದನ್ನು ಇದನ್ನು ಆಚರಿಸುವವರು ನಿರ್ಧರಿಸಬೇಕೇ ವಿನಹಾ ವೇದಿಕೆ ವೀರರು ಮತ್ತು ಅಂಕಣಕಾರರಲ್ಲ. ಇದರ ವಿರುದ್ಧದ ಹೋರಾಟ ಮತ್ತು ಸಂಘರ್ಷ ಲಾಗಾಯ್ತನಿಂದ ನಡೆಯುತ್ತಿದ್ದು, ಇದು ಕಡಿಮೆಯಾಗುವ ಬದಲು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಆಚರಣೆಯಲ್ಲಿ ಫಲ ಇಲ್ಲದಿದ್ದರೆ ಈ ಪರಿಸ್ಥಿತಿ ಕಾಣುತ್ತಿತ್ತೇ? ರೋಗಿ ಪುನಃ ಅದೇ ವೈದ್ಯರಲ್ಲಿ ಬರುತ್ತಾನೆ ಎಂದರೆ, ಅದು ವಿಶ್ವಾಸದ ಸಂಕೇತ.
ಭಾವನಾತ್ಮಕ ವಿಚಾರಗಳಲ್ಲಿ ಕಾನೂನನ್ನು ತರುವುದು ಅತಂಕಕಾರಿ ಸಾಮಾಜಿಕ ಬೆಳವಣಿಗೆ. ಅದನ್ನು ತಂದರೂ ರಂಗೋಲಿಯ ಕೆಳಗೆ ನುಸುಳುವವರ ದೇಶದಲ್ಲಿ ಅದನ್ನು ಯಾಮಾರಿಸಿ ಮುನ್ನುಗ್ಗುವುದು ದೊಡ್ಡ ವಿಷಯವಲ್ಲ. ಹಾಗೆಯೇ ಇಂತಹ ಕಾನೂನು ವರದಕ್ಷಿಣೆ ಮತ್ತು ಲಂಚ ನಿಷೇಧ ಕಾನೂನಿನಂತೆ ಚಾಣಾಕ್ಷರ ಅರ್ಥೈಸುವಿಕೆಯಲ್ಲಿ ಹಳ್ಳ ಹಿಡಿದರೆ ಆಶ್ಚರ್ಯವಿಲ್ಲ.
ವೌಢ್ಯ ಮತ್ತು ಮೂಢ ನಂಬಿಕೆಯನ್ನು ಸಂಪೂರ್ಣ ವಾಗಿ ಸರಿ ಎನ್ನಲಾಗುವುದಿಲ್ಲ.ಇವು ಆರಂಭವಾದಾಗಿನ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಪದ್ಧತಿಗಳು ಹೇಗಿದ್ದವು ಮತ್ತು ಬದಲಾದ ಪರಿಸ್ಥಿತಿಯಲ್ಲಿ ಅವುಗಳನ್ನು ಅದೇ ರೂಪದಲ್ಲಿ ನಡೆಸಿಕೊಂಡು ಹೋಗುವುದು ಸಾಧ್ಯವೇ, ಅವುಗಳನ್ನು ಮೂಲ ಉದ್ದೇಶಕ್ಕೆ ಚ್ಯುತಿ ಬಾರದಂತೆ ನಮ್ಮ ಅನುಕೂಲಕ್ಕೆ ಸರಿಯಾಗಿ ಬದಲಾಯಿಸಲು ಸಾಧ್ಯವೇ ಎನ್ನುವ ಚಿಂತನೆಯಾಗಬೇಕಾಗಿದೆ. ಸಮಾಜ ಸುಧಾರಕರು, ಬುದ್ಧಿ ಜೀವಿಗಳು ಅಕ್ಷೇಪಿಸಿದ ಪ್ರತಿಯೊಂದು ಅಂಶವನ್ನೂ ಸಾರಾಸಗಟಾಗಿ ವಿರೋಧಿಸದೇ, ನಮ್ಮ ಬದಲಾವಣೆಯ, ಪರಿವರ್ತನೆಯ ಮೂಸೆಯಲ್ಲಿ ಅವರ ಕೆಲವು ಆಕ್ಷೇಪಣೆಗಳನ್ನು ರೂಢಿಸಿಕೊಳ್ಳುವುದರಲ್ಲಿ ಅರ್ಥವಿದೆ ಮತ್ತು ಜಾಣತನ ಇದೆ. ಮಡೆ ಸ್ನಾನ, ಎಡೆ ಸ್ನಾನ ಆರಂಭವಾದಾಗಿನ ಪರಿಸ್ಥಿತಿ ಮತ್ತು ಉದ್ದೇಶ ಯಾರಿಗೂ ತಿಳಿಯದು. ಬದಲಾಗುತ್ತಿರುವ ಇಂದಿನ ಸಾಮಾಜಿಕ ಚಿಂತನೆ ಮತ್ತು ಪರಿಸ್ಥಿತಿಯಲ್ಲಿ ಇವುಗಳನ್ನು ಅದೇ ರೀತಿ ಮುಂದುವರಿಸುವ ಬಗೆಗೆ ದೀರ್ಘ ಚರ್ಚೆಯ ಅಗತ್ಯವಿದೆ. ಇಂದಿನ ಯುವಜನಾಂಗ ಮತ್ತು ಪ್ರಜ್ಞಾವಂತರು ಇವುಗಳ ಬಗೆಗೆ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತ ಮಾಡದಿದ್ದರೂ,ಅವುಗಳ ಬಗೆಗೆ ಅವರಿಗೆ ತಮ್ಮದೇ ಆದ ಆಭಿಪ್ರಾಯವಿದೆ. ಮಡೆ ಸ್ನಾನ ಎಡೆಸ್ನಾನವಾಗಿರುವುದು ಈ ನಿಟ್ಟಿನಲ್ಲಿ ಬದಲಾವಣೆಯ ಮೊದಲ ಮತ್ತು ಸ್ವಾಗತಾರ್ಹ ಹೆಜ್ಜೆ ಎನ್ನಬಹುದು. ಇದೇ ರೀತಿ ಸಾಕಷ್ಟು ಬದಲಾವಣೆಗಳನ್ನು ಮತ್ತು ಪರಿವರ್ತನೆಗಳನ್ನು ಬದಲಾಗುತ್ತಿರುವ ಬದುಕಿಗೆ ಸ್ಪಂದಿಸಿ ರೂಢಿಸಿಕೊಳ್ಳಬೇಕಾಗಿದೆ. ಇಂತಹ ವಿಷಯಗಳಲ್ಲಿ ಕಾನೂನಿನ ಮೊರೆಹೋಗಿ ನೌಕರ ಶಾಹಿ ಮತ್ತು ಸರಕಾರಗಳು ನಮ್ಮ ಆಂತರಿಕ ಧಾರ್ಮಿಕ ಚಟುವಟಿಕೆ ಮತ್ತು ವಿಧಿವಿಧಾನಗಳಲ್ಲಿ ಕೈಯಾಡಿಸುವುದನ್ನು ತಪ್ಪಿಸಿ ನಾವೇ ಛ್ಝ್ಛಿ ್ಟಛ್ಛಿಟ್ಟಞಠಿಜಿಟ್ಞ ಕೈಗೊಂಡರೆ ಅದು ಅರ್ಥಪೂರ್ಣವಾಗಿರುತ್ತದೆ ಮತ್ತು ಪಾಶ್ಚಾತ್ಯೀಕರಣದಿಂದಾಗಿ ಧರ್ಮದಿಂದ ದೂರವಾಗುತ್ತಿರುವ ಯವಜನಾಂಗವನ್ನು ತಡೆಹಿಡಿ ಯಬಹುದು. ಕಾನೂನು ತನ್ನ ಕಬಂದ ಬಾಹುಗಳನ್ನು ಚಾಚುವ ಮೊದಲು ನಾವು ಜಾಗೃತಗೊಳ್ಳಬೇಕಾಗಿದೆ.





