ಮನುವಾದಿ ಮನಸ್ಥಿತಿ ಇವರಲ್ಲೂ ಇಲ್ಲವೆಂದು ಹೇಳಲು ಸಾಧ್ಯವೇ?
ಬಳ್ಳಾರಿ ಜಿಲ್ಲೆಯಲ್ಲಿ ಡಿವೈಎಸ್ಪಿ ಅನುಪಮಾ ಶೆಣೈಯವರನ್ನು ಅವಮಾನ ಮಾಡಿ ದುರ್ವರ್ತನೆ ಹಾಗೂ ಅಹಂಕಾರ ತೋರಿದ ಸಚಿವ ಪರಮೇಶ್ವರ ನಾಯ್ಕಿ ರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕರಾವಳಿಯ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮಾಜ ಸರಕಾರವನ್ನು ಒತ್ತಾಯಿಸುತ್ತಿದೆ. ಪರಮೇಶ್ವರ ನಾಯ್ಕ್ ಇವರು ಮಾಡಿದ್ದು ದೊಡ್ಡ ತಪ್ಪು ಎಂದು ಎಲ್ಲರೂ ಒಪ್ಪುತ್ತಾರೆ. ಅನುಪಮಾ ಶೆಣೈ ಇವರು ತುಂಬಾ ಪ್ರಾಮಾಣಿಕ ಹಾಗೂ ಅತಿ ದಕ್ಷ ಅಧಿಕಾರಿಯಾಗಿದ್ದರು ಎಂಬುದೂ ನಿಜ. ಆದರೆ ಒಂದು ವೇಳೆ ಯಡಿಯೂರಪ್ಪ, ಸದಾನಂದ ಗೌಡರು ಅಥವಾ ಮಂಗಳೂರು- ಉಡುಪಿಯ ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಅನುಪಮಾರಿಗೆ ಫೋನ್ ಮಾಡಿದ್ದರೆ ಅದನ್ನು ನಿರ್ಲಕ್ಷಿಸಿ ಅದಕ್ಕೆ ಮರು ಉತ್ತರಿಸಲು ಅವರು ಇಷ್ಟು ವಿಳಂಬ ಮಾಡುತ್ತಿದ್ದರೇ? ಎಂಬ ಪ್ರಶ್ನೆ ಅನೇಕರು ಕೇಳುತ್ತಿದ್ದಾರೆ.
ಮೂಲತಃ ಮಂಗಳೂರು-ಉಡುಪಿಯ ಜಿಲ್ಲೆಗಳ ಕೊಂಕಣಿ ಸಾರಸ್ವತ ಬ್ರಾಹ್ಮಣರಲ್ಲಿ ನೂರಕ್ಕೆ ನೂರು ಕುಟುಂಬಗಳು ಆರೆಸ್ಸೆಸ್ಸ್ ಸದಸ್ಯರಾಗಿರುವುದು ನಿಜ. ಅನುಪಮ ಶೆಣೈ ಉಡುಪಿ ಜಿಲ್ಲೆಯ ಪಡುಬಿದ್ರೆ ಹತ್ತಿರದ ಉಚ್ಚಿಲ ಗ್ರಾಮದ ಮಧ್ಯಮ ವರ್ಗದಿಂದ ಬಂದು ಅತಿ ಕಷ್ಟಪಟ್ಟು ಕಲಿತು ಮೇಲೆ ಬಂದಿದ್ದು ನಿಜವಾದರೂ ಇತರ ಸಾರಸ್ವತ ಬ್ರಾಹ್ಮಣರಂತೆ ಅವರ ಸಂಪೂರ್ಣ ಕುಟುಂಬ ಆರೆಸ್ಸೆಸ್ಸ್ ಸದಸ್ಯರಾಗಿರುವುದು ನಿಜ ಎಂದು ಪಡುಬಿದ್ರೆಯಲ್ಲಿರುವ ನನ್ನ ಸಂಬಂಧಿಕರೇ ಹೇಳಿದ್ದಾರೆ. ನಾನು ರಾಷ್ಟ್ರೀಕೃತ ಬ್ಯಾಂಕಿನ ಉದ್ಯೋಗದಲ್ಲಿರುವಾಗ ಕಂಡಿದ್ದೇನೆಂದರೆ ಬ್ಯಾಂಕಿನ ಶಾಖೆಯಲ್ಲಿ ಮೇಲ್ಜಾತಿಯವರು ಮ್ಯಾನೇಜರ್ ಆಗಿದ್ದರೆ ಎಲ್ಲಾ ಮೇಲ್ಜಾತಿ ಗುಮಾಸ್ತರು ಅವರ ಆದೇಶಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು ಹಾಗೂ ಎಲ್ಲಾ ಕೆಲಸಗಳಲ್ಲಿ ಸಹಕರಿಸುತ್ತಿದ್ದರು. ಆದರೆ ದಲಿತ ಅಥವಾ ತೀರಾ ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಮ್ಯಾನೇಜರ್ ಆಗಿ ಅದೇ ಬ್ಯಾಂಕ್ ಶಾಖೆಗೆ ಬಂದರೆ ಆತನ ಆದೇಶಗಳನ್ನು ಗುಮಾಸ್ತರು ಮಾತ್ರವಲ್ಲ ಚಪರಾಸಿಗಳೂ ಹಗುರವಾಗಿ ತೆಗೆದುಕೊಳ್ಳುತ್ತಿದ್ದರು ಅಥವಾ ನಿರ್ಲಕ್ಷಿಸುತ್ತಿದ್ದರು, ಅಷ್ಟೇ ಅಲ್ಲ ಚಪರಾಸಿ ಸಹಿತ ಎಲ್ಲರೂ ಆ ಮ್ಯಾನೇಜರ್‌ರನ್ನು ಹಿಂದಿನಿಂದ ಏಕವಚನದಲ್ಲಿ ಸಂಬೋಧಿಸುತ್ತಿದ್ದರು. ರಾಷ್ಟ್ರೀಕೃತ ಬ್ಯಾಂಕಿನವರಲ್ಲಿ ಇರುವ ಈ ಮನುವಾದಿ ಮನಸ್ಥಿತಿ ನಮ್ಮ ರಾಜ್ಯ ಸರಕಾರದ ನೌಕರರಲ್ಲಿ ಹಾಗೂ ಅನುಪಮಾ ಶೆಣೈರಲ್ಲಿ ಇಲ್ಲವೆಂದು ಹೇಳಲು ಸಾಧ್ಯವೇ?







