ಹೂಡಿಕೆಗಿರುವ ‘ಅವಕಾಶಗಳ ಅನಾವರಣ’ಕ್ಕೆ ಸಾಕ್ಷಿಯಾದ ವಸ್ತು ಪ್ರದರ್ಶನ

ಬೆಂಗಳೂರು, ಫೆ. 3: ‘ಇನ್ವೆಸ್ಟ್ ಕರ್ನಾಟಕ’ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ, ಆಹಾರೋತ್ಪಾದನೆ, ಜವಳಿ, ಔದ್ಯೋಗಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೂಡಿಕೆಗಿರುವ ವಿಪುಲ ‘ಅವಕಾಶಗಳ ಅನಾವರಣ’ಕ್ಕೆ ವಸ್ತು ಪ್ರದರ್ಶನ ಸಾಕ್ಷಿಯಾಗಿತ್ತು.
ಬುಧವಾರ ಇಲ್ಲಿನ ಅರಮನೆ ಮೈದಾನದಲ್ಲಿ ‘ಇನ್ವೆಸ್ಟ್- ಕರ್ನಾಟಕ’ ಸಮಾವೇಶದ ಅಂಗವಾಗಿ ಏರ್ಪಡಿಸಿದ್ದ ಬೃಹತ್ ವಸ್ತು ಪ್ರದರ್ಶನಕ್ಕೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿದ್ಯುಕ್ತ ಚಾಲನೆ ನೀಡಿದರು.
ದೇಶ-ವಿದೇಶಗಳ, ಪ್ರತಿಷ್ಠಿತ ಕಂಪೆನಿಗಳು, ಪ್ರತಿಷ್ಠಿತ ಬ್ಯಾಂಕುಗಳು ಹಾಗೂ ರಾಜ್ಯ ಸರಕಾರದ ಇಂಧನ, ನಗರಾಭಿವೃದ್ಧಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಿದ್ದವು. ಅಲ್ಲದೆ, ಸೋಲಾರ್ ವಿದ್ಯುತ್ ಉತ್ಪಾದನೆ ಪ್ರಾತ್ಯಕ್ಷಿಕೆ ಜನಾಕರ್ಷಣೆಯ ಕೇಂದ್ರ ಬಿಂದು ಆಗಿತ್ತು.
ಸೋಲಾರ್ ಪಂಪ್‌ಸೆಟ್: ಸೌರಶಕ್ತಿಯಿಂದ ಚಲಿಸುವ ಕಾರು, ಸೋಲಾರ್ ಶಕ್ತಿಯಿಂದ ನೀರೆತ್ತುವ ಪಂಪ್ ಸೆಟ್, ಸೌರಶಕ್ತಿಯಿಂದ ನಡೆಯುವ ಫ್ಯಾನ್, ಬೀದಿದೀಪ ಪ್ರಾತ್ಯಕ್ಷಿಕೆ ನಿಜಕ್ಕೂ ಅದ್ಭುತ. 3 ಅಶ್ವಶಕ್ತಿಯಿಂದ 10 ಅಶ್ವಶಕ್ತಿಯ ವರೆಗೆ ನೀರೆತ್ತುವ ಕೃಷಿ ಪಂಪ್‌ಸೆಟ್‌ಗೆ ಸಬ್ಸಿಡಿಯೂ ಲಭ್ಯವಿದೆ ಎಂದು ‘ಸನ್‌ವಿನ್’ ಕಂಪೆನಿ ಹೇಳಿದೆ.
ದುಬಾರಿ ಬೈಕ್: ಬಿಎಂಡಬ್ಲೂ ಕಾರಿನಂತೆಯೇ ಐಷಾರಾಮಿ ಬೈಕ್ ವಸ್ತು ಪ್ರದರ್ಶನದಲ್ಲಿ ಜನಾಕರ್ಷಣೆಯಾಗಿತ್ತು. ಆ ಬೈಕಿನ ಮುಂದೆ ನಿಂತು ನೂರಾರು ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಕೃಷಿ, ತೋಟಗಾರಿಕೆ, ಮೂಲಸೌಕರ್ಯ, ಮೀನುಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಳಿಗೆಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ರಿಲಯನ್ಸ್, ಬಿಎಸ್ಸೆನ್ನೆಲ್, ಎರ್‌ಟೆಲ್ ಸೇರಿದಂತೆ ವಿವಿಧ ಕಂಪೆನಿಗಳು ತಮ್ಮ ಮಳಿಗೆಗಳನ್ನು ತೆರೆದಿದ್ದವು. ಅಲ್ಲದೆ, ಜರ್ಮನಿ, ಕೊರಿಯಾ, ಸ್ವೀಡನ್ ಸೇರಿದಂತೆ ಹಲವು ವಿದೇಶದ ಅನೇಕ ಕಂಪೆನಿಗಳು ತಮ್ಮ-ತಮ್ಮ ದೇಶದಲ್ಲಿನ ಉತ್ಪನ್ನಗಳನ್ನು ಪ್ರದರ್ಶಿಸಿದ್ದವು.
ಸ್ಥಳದಲ್ಲೇ ಸಾಲ ಸೌಲಭ್ಯ: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಗಮಿಸುವ ಉದ್ಯಮಪತಿಗಳಿಗೆ ಹಾಗೂ ಹೂಡಿಕೆದಾರರಿಗೆ ಸಾಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಬ್ಯಾಂಕುಗಳು ತಮ್ಮ ಮಳಿಗೆಗಳನ್ನು ತೆರೆದಿದ್ದು, ಉದ್ಯಮಿಗಳಿಗೆ ಅಗತ್ಯ ಮಾಹಿತಿ ನೀಡಿದವು.
‘ಬಂಜಾರರ ಕಲೆ’ ಎಂದೇ ಖ್ಯಾತಿ ಗಳಿಸಿರುವ ಕಸೂತಿ ಕಲೆಯ ವಸ್ತುಗಳ ಪ್ರದರ್ಶನ ಹಾಗೂ ಕೈಮಗ್ಗದಿಂದ ಉತ್ಪಾದಿಸಿರುವ ಉಡುಪುಗಳು, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಕೇಂದ್ರದ ಹೊಸ ಸಂಶೋಧನೆಗಳ ಪ್ರಾತ್ಯಕ್ಷತೆ ಪ್ರದರ್ಶನದಲ್ಲಿ ವಿಶೇಷವಾಗಿದ್ದವು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಅನಂತ ಕುಮಾರ್, ಮೇಲ್ಮನೆ ಸಭಾಪತಿ ಶಂಕರ ಮೂರ್ತಿ, ಸಚಿವರಾದ ಆರ್.ವಿ. ದೇಶಪಾಂಡೆ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಯು.ಟಿ.ಖಾದರ್, ಕೃಷ್ಣ ಭೈರೇಗೌಡ ಸೇರಿದಂತೆ ಹಲವು ಗಣ್ಯರು ಪ್ರದರ್ಶನವನ್ನು ವೀಕ್ಷಿಸಿದರು.





