ನಾಗರಿಕರಿಗೆ ಬಾಂಬೆ ಹೈಕೋರ್ಟ್ ಸಲಹೆ
ಭ್ರಷ್ಟಾಚಾರ ನಿಗ್ರಹಕ್ಕೆ ಸರಕಾರ ವಿಫಲವಾದರೆ ತೆರಿಗೆ ಪಾವತಿಸಬೇಡಿ
ನಾಗಪುರ, ಫೆ.3: ಸತತ ಹೆಚ್ಚುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಸಂಖ್ಯೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್‌ನ ಪುಣೆ ಪೀಠವು ಈ ಪಿಡುಗಿನ ವಿರುದ್ಧ ಧ್ವನಿಯೆತ್ತುವಂತೆ ಹಾಗೂ ಅದನ್ನು ನಿಯಂತ್ರಿಸಲು ಸರಕಾರ ವಿಫಲವಾದಲ್ಲಿ ಅಸಹಕಾರ ಚಳವಳಿ ಆರಂಭಿಸಿ ತೆರಿಗೆ ಪಾವತಿಸಲು ನಿರಾಕರಿಸುವಂತೆ ಮಂಗಳವಾರ ನಾಗರಿಕರಿಗೆ ಕರೆ ನೀಡಿದೆ.
ಮತಂಗ ಸಮುದಾಯದ ಏಳಿಗೆಗಾಗಿ ಸ್ಥಾಪಿಸಲಾಗಿರುವ ಲೋಕ್ ಶಹೀರ್ ಅಣ್ಣಾಭಾವೂ ಸಾಠೆ ಮಹಾಮಂಡಲದ (ಎಲ್‌ಎಎಸ್‌ವಿಎಂ) 385 ಕೋಟಿ ರೂ. ನಿಧಿ ಅವ್ಯವಹಾರವನ್ನು ನಿರ್ಲಕ್ಷಿಸಿದುದಕ್ಕಾಗಿ ಮಹಾರಾಷ್ಟ್ರ ಸರಕಾರ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರಗಳಿಗೆ (ಬಿಒಎಂ) ನ್ಯಾಯಮೂರ್ತಿ ಅರುಣ್ ಚೌಧರಿ ಹಲವು ಆರೋಪಣೆಗಳನ್ನು ಹೊರಡಿಸಿದ್ದಾರೆ.
ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅಂತಹ ಆರೋಪಗಳ ಸತ್ಯಾಸತ್ಯವನ್ನು ಪರಿಶೀಲಿಸಿ, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಅವರು ಆದೇಶಿಸಿದ್ದಾರೆ.
ಭ್ರಷ್ಟಾಚಾರವನ್ನು ಅನೇಕ ಹಾವುಗಳ ತಲೆಗಳಿರುವ ದೆವ್ವವೆಂದು ವ್ಯಾಖ್ಯಾನಿಸಿದ ಚೌಧರಿ, ತಮಗೆ ಸಾಕೋ ಸಾಕಾಗಿದೆಯೆಂದು ನಾಗರಿಕರು ಮುಂದೆ ಬಂದು ಸರಕಾರಕ್ಕೆ ಹೇಳಲು ಇದು ಸರಿಯಾದ ಸಮಯವಾಗಿದೆ. ಭ್ರಷ್ಟಾಚಾರದ ಅಪವಿತ್ರ ವಾತಾವರಣವನ್ನು ಎಲ್ಲರೂ ಒಗ್ಗಟ್ಟಾದರೆ ನಿವಾರಿಸಬಹುದು. ಅದು ಮುಂದುವರಿದಲ್ಲಿ, ತೆರಿಗೆದಾರರು ಅಸಹಕಾರ ಚಳವಳಿಯ ಮೂಲಕ ತೆರಿಗೆ ಪಾವತಿಸಲು ನಿರಾಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಎಲ್‌ಎಎಸ್‌ವಿಎಂನಿಂದ ಭಂಡಾರಾ ಜಿಲ್ಲಾಧ್ಯಕ್ಷ ಪ್ರಹ್ಲಾದ್ ಪವಾರ್ ಎಂಬವರ ನಿರೀಕ್ಷಣಾ ಜಾಮೀನು ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ಈ ಖಂಡನೆಯ ಮಾತನಾಡಿದ್ದಾರೆ.
ಪರಿಶಿಷ್ಟ ಜಾತಿಯ ಮತಂಗ ಸಮುದಾಯದ ಜನರಿಗೆ ಹಂಚಲೆಂದಿದ್ದ 24 ಕೋಟಿ ರೂ. ನಿಧಿ ಅವ್ಯವಹಾರದ ಆರೋಪ ಪವಾರ್ ಮೇಲಿದೆ. ಮತಂಗ ಸಮುದಾಯದ ವರು ಕೊಂಬು ಹಾಗೂ ಕಹಳೆ ಊದಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.







