ರಾಜ್ಯದ ಆರ್ಥಿಕತೆ 700 ಶತಕೋಟಿ ಡಾಲರ್‌ಗೆ ವೃದ್ಧಿಸುವ ಗುರಿ: ಮುಖ್ಯಮಂತ್ರಿ

ಬೆಂಗಳೂರು, ಫೆ.3: ರಾಜ್ಯವು ಪ್ರಸ್ತುತ 120 ಶತಕೋಟಿ ಯುಎಸ್ ಡಾಲರ್‌ನಷ್ಟು ಆರ್ಥಿಕ ಸಾಮರ್ಥ್ಯವನ್ನು ಹೊಂದಿದ್ದು, 2035ರ ವೇಳೆಗೆ ಇದನ್ನು 700 ಶತಕೋಟಿ ಡಾಲರ್‌ಗೆ ವೃದ್ಧಿಸುವ ಗುರಿಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ಅರಮನೆಯಲ್ಲಿ ರಾಜ್ಯ ಸರಕಾರ ಆಯೋಜಿಸಿರುವ ‘ಇನ್ವೆಸ್ಟ್ ಕರ್ನಾಟಕ- 2016’ ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶವು ಶೇ.9ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದರೆ, ನಾವು ಶೇ.10ರಷ್ಟು ಬೆಳವಣಿಗೆಯ ಗುರಿಯನ್ನು ಎದುರು ನೋಡುತ್ತಿದ್ದೇವೆ. ವಿಶ್ವದೆಲ್ಲೆಡೆ ಕೈಗಾರಿಕಾ ಸ್ನೇಹಿಯಾಗಿ ಗುರುತಿಸಿಕೊಂಡಿರುವ ರಾಜ್ಯಗಳ ಪೈಕಿ ಕರ್ನಾಟಕವು ಒಂದು ಎಂಬುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ವಿಶ್ವ ಆರ್ಥಿಕ ಫೋರಂ ಗುರುತಿಸಿರುವಂತೆ ರಾಜ್ಯವು ವಿಶ್ವದ ಅತ್ಯುತ್ತಮ ನಾಲ್ಕು ಹೊಸಕಲ್ಪನೆಯ ತಾಣಗಳಲ್ಲಿ ಒಂದು. ಅಲ್ಲದೆ, ಸಿಲಿಕಾನ್ ವ್ಯಾಲಿ, ಬೋಸ್ಟನ್ ಹಾಗೂ ಲಂಡನ್ ನಂತರ ಮಾಹಿತಿ ತಂತ್ರಜ್ಞಾನದ ಕಣವಾಗಿ ಬೆಂಗಳೂರನ್ನು ಪರಿಗಣಿಸಲಾಗಿದೆ. ಈ ಸಾಧನೆಯನ್ನು ದಿನ ಬೆಳಗಾಗುವುದರೊಳಗಾಗಿ ಮಾಡಿಲ್ಲ. ಶತಮಾನದ ಪರಿಶ್ರಮ ಇದರ ಹಿಂದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸುಮಾರು 500 ಫಾರ್ಚೂನ್ ಕಂಪೆನಿಗಳು ಕರ್ನಾಟಕವನ್ನು ತಮ್ಮ ತವರು ಮಾಡಿಕೊಂಡಿವೆ. ಅಲ್ಲದೆ, ಹಲವು ವರ್ಷಗಳಿಂದ ಹೂಡಿಕೆಯನ್ನು ಮುಂದುವರಿಸಿವೆ. ಹೊಸ ಕಂಪೆನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ, ತಂತಜ್ಞಾನ, ಬಾಹ್ಯಾಕಾಶ ಹಾಗೂ ನವೋದ್ಯಮದ ರಾಜಧಾನಿಯಾಗಿ ಬೆಂಗಳೂರು ಗುರುತಿಸಿ ಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ತಂತ್ರಜ್ಞಾನದ ಮೂಲಕ ಭವಿಷ್ಯ ನಿರ್ಮಾಣ: ರಾಜ್ಯದಲ್ಲಿನ ಪ್ರತಿಭೆಗಳಿಂದಾಗಿ ತಂತ್ರಜ್ಞಾನದ ಮೂಲಕ ಭವಿಷ್ಯ ನಿರ್ಮಾಣ ಮಾಡುವ ನಮ್ಮ ಕನಸು ನನಸಾಗಲಿದೆ. ರಾಜ್ಯ ಸರಕಾರವು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅತ್ಯುತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣ, ವಿಮಾನ ನಿಲ್ದಾಣ, ಬಂದರು ಹಾಗೂ ರೈಲ್ವೆ ಸಂಪರ್ಕ ಜಾಲವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯ ಸರಕಾರವು ಎರಡೂವರೆ ವರ್ಷಗಳಿಂದ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಹಲವಾರು ನೀತಿಗಳನ್ನು ಬಲಪಡಿ ಸಲಾಗಿದೆ. ಹೊಸ ಕೈಗಾರಿಕಾ ನೀತಿ 2014-19, ಮಾಹಿತಿ ತಂತ್ರಜ್ಞಾನ, ಜವಳಿ, ಕೃಷಿ ಹಾಗೂ ಆಹಾರ ಸಂಸ್ಕರಣಾ ನೀತಿ, ನವೋದ್ಯಮ, ಪ್ರವಾಸೋದ್ಯಮ ಹಾಗೂ ಇತರ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.
ನವೋದ್ಯಮ ನೀತಿಯೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ನಿರ್ಮಾಣ ಕ್ಷೇತ್ರವನ್ನು ಒಳಗೊಳ್ಳಲಿದೆ. ನಾಸ್ಕೋಮ್ ಸಹಯೋಗದೊಂದಿಗೆ ರಾಜ್ಯ ಸರಕಾರ ಆರಂಭಿಸಿದ ಮೊದಲ ನವೋದ್ಯಮ ಉಗ್ರಾಣದ ಯಶಸ್ಸಿನಿಂದಾಗಿ ಇನ್ನೂ 64 ನವೋದ್ಯಮಗಳು ಆರಂಭಕ್ಕೆ ಸಿದ್ಧವಾಗುತ್ತಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ವಿದೇಶಿ ನೇರ ಬಂಡವಾಳ(5.2 ಶತಕೋಟಿ ಯುಎಸ್ ಡಾಲರ್)ವನ್ನು ಸ್ವೀಕರಿಸಿರುವ ಎರಡನೆ ರಾಜ್ಯ ನಮ್ಮದಾಗಿದೆ. ಈಗಾಗಲೆ ಸರಕಾರ ಸುಮಾರು 20 ಶತಕೋಟಿ ಯುಎಸ್ ಡಾಲರ್‌ನ 500ಕ್ಕೂ ಹೆಚ್ಚು ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುವುದು ನಮ್ಮ ಗುರಿ ಎಂದು ಸಿದ್ದರಾಮಯ್ಯ ಹೇಳಿದರು. ಕೇಂದ್ರ ಸರಕಾರವು ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಸಗೊಬ್ಬರ ಉತ್ಪಾದನಾ ಘಟಕ ಆರಂಭಿಸಲು 500 ಎಕರೆ ಭೂಮಿಯನ್ನು ಉತ್ತರ ಕರ್ನಾಟಕ ಭಾಗದ ಬಿಜಾಪುರ, ಬಾಗಲಕೋಟೆ, ಧಾರವಾಡ ಅಥವಾ ರಾಯಚೂರು ಎಲ್ಲಿ ಬೇಕೊ ಅಲ್ಲಿ ಒದಗಿಸಲಾಗುವುದು. ಅಲ್ಲದೆ, ಔಷಧ ಉತ್ಪಾದನಾ ಘಟಕಕ್ಕೆ ಮೈಸೂರು ಬಳಿ 100 ಎಕರೆ ಭೂಮಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.







