ರಣಜಿ ಕ್ವಾರ್ಟರ್ ಫೈನಲ್:ಹೆರ್ವಾಡ್ಕರ್ ಶತಕ ; ಮುಂಬೈ 303/6
ಮೈಸೂರು, ಫೆ.3: ಆರಂಭಿಕ ದಾಂಡಿಗ ಅಖಿಲ್ ಹೆರ್ವಾಡ್ಕರ್ ಶತಕ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ಸಹಾಯದಿಂದ ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಇಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಮುಂಬೈ ತಂಡ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 303 ರನ್ ಗಳಿಸಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡ 6 ಓವರ್‌ಗಳಲ್ಲಿ 21 ರನ್‌ಗೆ 1 ವಿಕೆಟ್ ಕಳೆದುಕೊಂಡಿತು. ಹೆರ್ವಾಡ್ಕರ್ ಜೊತೆ ಇನಿಂಗ್ಸ್ ಆರಂಭಿಸಿದ ಜೈ ಬಿಸ್ತಾ 9 ರನ್ ಗಳಿಸಿ ಜಸ್‌ಕರಣ್ ಸಿಂಗ್ ದಾಳಿಯನ್ನು ಎದುರಿಸಲಾರದೆ ಪೆವಿಲಿಯನ್ ಸೇರಿದರು.
ಆಗ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಹೆರ್ವಾಡ್ಕರ್ ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿ 2ನೆ ವಿಕೆಟ್‌ಗೆ 70 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರ್‌ನ್ನು 23.5 ಓವರ್‌ಗಳಲ್ಲಿ 91ಕ್ಕೆ ತಲುಪಿಸಿದರು. 45 ರನ್ ಗಳಿಸಿದ ಅಯ್ಯರ್ ಅವರು ಎಲ್‌ಬಿಡಬ್ಲು ಬಲೆಗೆ ಬಿದ್ದರು.
ಮೂರನೆ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಮತ್ತು ಹೆರ್ವಾಡ್ಕರ್ 136 ರನ್‌ಗಳ ಜೊತೆಯಾಟ ನೀಡಿ ತಂಟಡದ ಸ್ಕೋರನ್ನು 200ರ ಗಡಿ ದಾಟಿಸಿದರು.
ಯಾದವ್ ಕೇವಲ 70 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳ ಸಹಿತ 75 ರನ್ ಗಳಿಸಿ ಔಟಾದರು. ಬಳಿಕ ತಂಡದ ಮೂರು ವಿಕೆಟ್‌ಗಳು ಬೇಗನೆ ಉರುಳಿತು.ಸಿದ್ದೇಶ್ ಲಾಡ್(16), ನಾಯಕ ಅಭಿಷೇಕ್ ನಾಯರ್(25), ಧವಳ್ ಕುಲಕರ್ಣಿ (11) ನಿರ್ಗಮಿಸಿದರು. ಈ ನಡುವೆ ಹೆರ್ವಾಡ್ಕರ್ ಶತಕ ಪೂರ್ಣಗೊಳಿಸಿದರು.
ನಾಲ್ಕನೆ ಪ್ರಥಮ ದರ್ಜೆ ಶತಕ ಪೂರ್ಣಗೊಳಿಸಿದ ಹೆರ್ವಾಡ್ಕರ್ 287 ನಿಮಿಷಗಳ ಬ್ಯಾಟಿಂಗ್‌ನಲ್ಲಿ 217 ಎಸೆತಗಳನ್ನು ಎದುರಿಸಿದರು. 12 ಬೌಂಡರಿಗಳ ನೆರವಿನಿಂದ 107 ರನ್ ಗಳಿಸಿ ಔಟಾದರು.
ಯಾದವ್ ನಿರ್ಗಮನದ ಬೆನ್ನಿಗೆ ಮುಂಬೈ ಕ್ಷಿಪ್ರವಾಗಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದ್ದ ಮುಂಬೈ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 303 ರನ್ ಗಳಿಸಿತು. ಸಂಕ್ಷಿಪ್ತ ಸ್ಕೋರ್ ವಿವರ
ಮುಂಬೈ ಮೊದಲ ಇನಿಂಗ್ಸ್ 90 ಓವರ್‌ಗಲ್ಲಿ 303/6( ಅಖಿಲ್ ಹೆರ್ವಾಡ್ಕರ್107, ಶ್ರೇಯಸ್ ಅಯ್ಯರ್45, ಸೂರ್ಯಕುಮಾರ್ ಯಾದವ್ 75; ಜಸ್‌ಕರಣ್ ಸಿಂಗ್ 2-57, ನದೀಮ್ 2-96).
ಸೌರಾಷ್ಟ್ರ ಮೇಲುಗೈ:ಮಿಂಚಿದ ಉನದ್ಕಟ್, ವಿಶಾಖಪಟ್ಟಣ, ಫೆ.3: ಜಯದೇವ್ ಉನದ್ಕಟ್ ಪಡೆದ ಐದು ವಿಕೆಟ್ ಗೊಂಚಲುಗಳ ನೆರವಿನಿಂದ ಸೌರಾಷ್ಟ್ರ ತಂಡ ವಿದರ್ಭ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 151 ರನ್‌ಗೆ ಆಲೌಟ್ ಮಾಡಿದೆ.
ಉನದ್ಕಟ್(5-70) ದಾಳಿಗೆ ಸಿಲುಕಿದ ವಿದರ್ಭ ತಂಡ 50.4 ಓವರ್‌ಗಳಲ್ಲಿ 151 ರನ್‌ಗೆ ಆಲೌಟಾಯಿತು. ದಿನದಾಟದಂತ್ಯಕ್ಕೆ ಸೌರಾಷ್ಟ್ರ 1 ವಿಕೆಟ್‌ಗೆ 70 ರನ್ ಗಳಿಸಿತ್ತು. ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ 71 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ ಔಟಾಗದೆ 45 ರನ್ ಗಳಿಸಿದ್ದರು.







