ಟಾಟಾ ಕಾರಿನ ಹೆಸರಿಗೆ ಕುತ್ತು ತಂದ ಝಿಕಾ
ಮುಂಬೈ, ಫೆ.3: ಟಾಟಾ ಮೋಟರ್ಸ್ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಝಿಕಾ ಕಾರಿಗೆ ಝಿಪ್ಪಿಕಾರ್ ಎಂದು ಮರು ನಾಮಕರಣ ಮಾಡಿದೆ. ವಿಶ್ವದ ಹಲವೆಡೆಗಳಲ್ಲಿ ಝಿಕಾ ವೈರಸ್ ಹರಡಿರುವ ಹಿನ್ನೆಲೆಯಲ್ಲಿ, ಬಾರ್ಸಿಲೋನಾ ಫುಟ್‌ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಪ್ರಚಾರ ರಾಯಭಾರಿಯಾಗಿರುವ ಈ ಕಾರಿನ ಹೆಸರನ್ನು ಬದಲಿಸಲಾಗಿದೆ.
ಈ ಕಾರಿನ ಹೆಸರನ್ನೇ ಹೋಲುವ ವೈರಸ್‌ನಿಂದ ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡಿರುವ ಹಿನ್ನೆಲೆಯಲ್ಲಿ ಹೆಸರು ಬದಲಾಯಿಸಲಾಗಿದೆ ಎಂದು ಭಾರತದ ಅತಿದೊಡ್ಡ ಕಾರು ಉತ್ಪಾದಕ ಕಂಪೆನಿ ಪ್ರಕಟನೆಯಲ್ಲಿ ಹೇಳಿದೆ.
ಟಾಟಾ ಕಂಪೆನಿ ಇತ್ತೀಚೆಗೆ ಫುಟ್ಬಾಲ್ ತಾರೆ ಮೆಸ್ಸಿಯವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಬಳಸಿಕೊಂಡು ಇದರ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಆದರೆ ಇದೇ ವೇಳೆ ಲ್ಯಾಟಿನ್ ಅಮೆರಿಕದಲ್ಲಿ ದೋಷಯುಕ್ತ ಮಕ್ಕಳ ಹುಟ್ಟಿಗೆ ಕಾರಣವಾಗುವ ಝಿಕಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ವಿಶ್ವಾದ್ಯಂತ ಈ ವೈರಸ್ ಕರಾಳ ಬಾಹುವನ್ನು ಚಾಚುತ್ತಿದೆ. ಟಾಟಾ ಮೋಟರ್ಸ್ ಸಾಮಾಜಿಕ ಕಳಕಳಿಯ ಕಂಪೆನಿ. ಆದ್ದರಿಂದ ಕಾರಿನ ಹೆಸರು ಬದಲಾಯಿಸುತ್ತಿದೆ ಎಂದು ಪ್ರಕಟನೆ ಹೇಳಿದೆ.
ಯುವಜನಾಂಗವನ್ನು ಗುರಿ ಮಾಡಿರುವ ಈ ಕಾರು ಮುಂದಿನ ವಾರ ದಿಲ್ಲಿಯಲ್ಲಿ ನಡೆಯುವ ಆಟೊ ಎಕ್ಸ್‌ಪೋ-2016ರಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾಗುವ ಕಾರುಗಳಲ್ಲಿ ಝಿಕಾ ಹೆಸರು ಇದ್ದರೂ, ಕೆಲವೇ ವಾರಗಳಲ್ಲಿ ಬದಲಿಸಲಾಗುವುದು.





