ಇನ್ವೆಸ್ಟ್ ಕರ್ನಾಟಕ-2016ಕ್ಕೆ ಅದ್ದೂರಿ ಚಾಲನೆ: ಬಡತನ ನಿರ್ಮೂಲನೆಗೆ ಆದ್ಯತೆ - ಜೇಟ್ಲಿ

ಬೆಂಗಳೂರು, ಫೆ.3: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಇನ್ವೆಸ್ಟ್ ಕರ್ನಾಟಕ-2016’ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಗರದ ಅರಮನೆಯಲ್ಲಿ ಸಿದ್ಧಪಡಿಸಲಾಗಿದ್ದ ವರ್ಣರಂಜಿತ ವೇದಿಕೆಯಲ್ಲಿ ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವ ಅರುಣ್ ಜೇಟ್ಲಿ ಬುಧವಾರ ಚಾಲನೆ ನೀಡಿದ್ದಾರೆ.
ದೇಶದ ಅಭಿವೃದ್ಧಿ ಹಾಗೂ ಬಡತನ ನಿರ್ಮೂಲನೆಗೆ ಆದ್ಯತೆ ನೀಡಬೇಕು. ಆದುದರಿಂದ ಹೂಡಿಕೆದಾರರಿಗೆ ಕೈಗಾರಿಕಾಸ್ನೇಹಿ ವಾತಾವರಣವನ್ನು ನಿರ್ಮಿಸಬೇಕು. ರಾಜ್ಯದ ಆರ್ಥಿಕ ಪ್ರಗತಿಗೆ ಎಲ್ಲ ರೀತಿಯ ಸಹಕಾರವನ್ನು ಕೇಂದ್ರ ಸರಕಾರ ನೀಡಲಿದೆ ಎಂದು ಜೇಟ್ಲಿ ಹೇಳಿದರು.
ಭಾರತದ ಆರ್ಥಿಕತೆಯು ವಿಶ್ವದಲ್ಲೇ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. 2001, 2008 ಹಾಗೂ 2015ರಲ್ಲಿ ಎದುರಾದ ಜಾಗತಿಕ ಸವಾಲುಗಳನ್ನು ಭಾರತ ಸಮರ್ಥವಾಗಿ ಎದುರಿಸಿದೆ. ಖಾಸಗಿ ವಲಯವು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ದೇಶದ ಪ್ರಗತಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಒಂದು ಧ್ವನಿಯಾಗಿ ಕೆಲಸ ಮಾಡಬೇಕು. ಕರ್ನಾಟಕ ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಹೊಂದಿರುವ ರಾಜ್ಯ. ದೇಶದ ಜಿಡಿಪಿಗೆ ಶೇ.2-3ರಷ್ಟು ಹೆಚ್ಚು ಕೊಡುಗೆ ನೀಡುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳು ಆಗಬೇಕು ಎಂದು ಅರುಣ್ ಜೇಟ್ಲಿ ಹೇಳಿದರು.
ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳಿಂದಾಗಿ ದೇಶದ ಶಿಕ್ಷಣ ಕ್ಷೇತ್ರದ ನೇತೃತ್ವವನ್ನು ಕರ್ನಾಟಕ ವಹಿಸಿಕೊಂಡಿದೆ. ನವೋದ್ಯಮ, ಏರೋಸ್ಪೇಸ್, ಉತ್ಪಾದನೆ, ಸೇವಾ ವಲಯಕ್ಕೆ ಆದ್ಯತೆ ಸಿಗಬೇಕು. ಬಂಡವಾಳ ಹೂಡಲು ಕರ್ನಾಟಕ ಉತ್ತಮ ಆಯ್ಕೆಯಾಗಿದ್ದು, ಯಾವುದೇ ಕಾರಣಕ್ಕೂ ಉದ್ಯಮಿಗಳಿಗೆ ನಿರಾಸೆಯಾಗುವುದಿಲ್ಲ ಎಂದು ಅರುಣ್ ಜೇಟ್ಲಿ ಭರವಸೆ ನೀಡಿದರು.
ಬಂಡವಾಳ ಹೂಡಿಕೆಗೆ ಸ್ಪರ್ಧಾತ್ಮಕವಾದ ಅವಕಾಶಗಳಿವೆ. ಅದನ್ನು ಕರ್ನಾಟಕ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ನೈಸರ್ಗಿಕ ಸಂಪನ್ಮೂಲ ವ್ಯಾಪಕವಾಗಿರುವ ಕರ್ನಾಟಕದಲ್ಲಿ ಹೂಡಿಕೆಯಿಂದ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಮಾತನಾಡಿ, ಬಂಡವಾಳ ಹೂಡಲು ಮುಂದೆ ಬರುವವರಿಗೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಅದರ ಜೊತೆಗೆ ಕೇಂದ್ರ ಸರಕಾರವು ತನ್ನ ಪಾಲಿನ ನೆರವನ್ನು ನೀಡಲಿದೆ ಎಂದರು.
ಅಭಿವೃದ್ಧಿಗೆ ಬಂಡವಾಳ ಹೂಡಿಕೆಯ ಅಗತ್ಯವಿದೆ. ಬಂಡವಾಳವಿದ್ದಾಗ ಅಭಿವೃದ್ಧಿ ಯೋಜನೆಗಳ ವೇಗ ಹೆಚ್ಚುತ್ತದೆ. ರಾಜ್ಯದಲ್ಲಿ ಶೇ.40ರಷ್ಟು ಬಹುರಾಷ್ಟ್ರೀಯ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ ರಾಜ್ಯದ ಎರಡು ನಗರಗಳು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿವೆ. ಅಮೃತ್ ಯೋಜನೆಯಡಿ 27 ನಗರಗಳು ಅಭಿವೃದ್ಧಿ ಹೊಂದಲಿವೆ ಎಂದು ವೆಂಕಯ್ಯನಾಯ್ಡು ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ನಿತಿನ್‌ಗಡ್ಕರಿ, ಎಂ.ವೆಂಕಯ್ಯನಾಯ್ಡು, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಎಸ್.ಆರ್.ಪಾಟೀಲ್, ಡಿ.ಕೆ.ಶಿವಕುಮಾರ್, ರೋಷನ್‌ಬೇಗ್, ಖಮರುಲ್ ಇಸ್ಲಾಮ್, ಯು.ಟಿ.ಖಾದರ್, ಕೃಷ್ಣಭೈರೇಗೌಡ, ಶರಣಪ್ರಕಾಶ್ ಪಾಟೀಲ್, ಸಭಾಪತಿ ಡಿ.ಎಚ್.ಶಂಕರಮೂರ್ತಿ, ಉದ್ಯಮಿಗಳಾದ ಅಝೀಮ್ ಪ್ರೇಮ್‌ಜಿ, ಕಿರಣ್ ಮಜೂಂದಾರ್ ಶಾ, ಕುಮಾರ ಮಂಗಳಂ ಬಿರ್ಲಾ, ಸಜ್ಜನ್ ಜಿಂದಾಲ್, ಉದಯ್‌ಕೋಟಕ್, ಗೌತಮ್ ಅದಾನಿ ಸೇರಿದಂತೆ ಫ್ರಾನ್ಸ್, ಸ್ವೀಡನ್, ಜಪಾನ್, ಯು.ಕೆ, ಇಟಲಿ ಸೇರಿದಂತೆ ಇನ್ನಿತರ ದೇಶಗಳ ಪ್ರಮುಖ ಉದ್ಯಮಿಗಳು ಪಾಲ್ಗೊಂಡಿದ್ದರು.
ಆಕರ್ಷಣೆಯ ಕೇಂದ್ರಬಿಂದು ರೋಬೋಟ್
ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ಹೂಡಿಕೆದಾರರಿಗೆ ಪರಿಚಯ ಮಾಡಿಕೊಡಲು ಏರ್ಪಡಿಸಲಾಗಿದ್ದ ವಿಡಿಯೋ ಪ್ರದರ್ಶನಕ್ಕೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಬೋಟ್ ಯಂತ್ರದ ಮೇಲೆ ಅಳವಡಿಸಲಾಗಿದ್ದ ಬಯೋಮೆಟ್ರಿಕ್ ಮಾದರಿಯ ಫಲಕಕ್ಕೆ ಸ್ಪರ್ಶಿಸುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.







