ಮುಸ್ಲಿಮರನ್ನು ಭಯೋತ್ಪಾದಕರೆಂದು ಬಿಂಬಿಸುವಲ್ಲಿ ಮಾಧ್ಯಮಗಳದ್ದು ಪ್ರಮುಖ ಪಾತ್ರ: ಅಧ್ಯಯನ

ನ್ಯೂಯಾರ್ಕ್,ಫೆ.3: ತಮ್ಮ ವರದಿಗಳ ಮೂಲಕ ಮುಸ್ಲಿಮರನ್ನು ಭಯೋತ್ಪಾದಕರೆಂದು ಬಿಂಬಿಸುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅಧ್ಯಯನವೊಂದು ಬೆಟ್ಟು ಮಾಡಿದೆ.
ಮುಸ್ಲಿಮ್ ವಿರೋಧಿ ವರದಿಗಳಿಗೆ ಹೆಚ್ಚು ತೆರೆದುಕೊಳ್ಳುವುದು ಮುಸ್ಲಿಮರು ಸ್ವಭಾವತಃ ಹಿಂಸಾ ಪ್ರವೃತ್ತಿಯವರು ಎಂಬ ಗ್ರಹಿಕೆ ಜನರಲ್ಲಿ ಬೆಳೆಯುವಂತೆ ಮಾಡುತ್ತಿದೆ ಎಂದು ಅಧ್ಯಯನ ಹೇಳಿದೆ.
ಕಠಿಣ ಮುಸ್ಲಿಮ್ ವಿರೋಧಿ ನಿಲುವನ್ನು ತಳೆಯುವ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ ಲಭಿಸಲಿದೆ ಎಂದು ಅಮೆರಿಕದ ಲೋವಾ ಸ್ಟೇಟ್ ವಿವಿಯ ಸಂಶೋಧಕರು ನಡೆಸಿರುವ ಸರಣಿ ಅಧ್ಯಯನಗಳು ಭವಿಷ್ಯ ನುಡಿದಿವೆ.
ರಾಜಕೀಯ ಮಡಿವಂತರು ಮತ್ತು ತಮ್ಮ ‘ಸಹ ಅಮೆರಿಕನ್’ರೊಂದಿಗೆ ಹೆಚ್ಚು ಪ್ರಬಲವಾಗಿ ಗುರುತಿಸಿಕೊಳ್ಳುವ ಜನರು ಮುಸ್ಲಿಮ್ ರಾಷ್ಟ್ರಗಳ ವಿರುದ್ಧ ಯುದ್ಧ ಮತ್ತು ಮುಸ್ಲಿಮ್ ಅಮೆರಿಕನ್ನರ ಸಾಮಾಜಿಕ ನಿರ್ಬಂಧಕ್ಕೆ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಅಧ್ಯಯನವು ಬಹಿರಂಗಗೊಳಿಸಿದೆ. ಆದರೆ ಮುಸ್ಲಿಮ್ ಅಮೆರಿಕನ್ನರ ಕುರಿತು ಧನಾತ್ಮಕ ವರದಿಗಳು ಮುಸ್ಲಿಮರು ಆಕ್ರಮಣಶೀಲರು ಎನ್ನುವ ಭಾವನೆಯನ್ನು ತಗ್ಗಿಸುವಲ್ಲಿ ನೆರವಾಗುತ್ತವೆ ಎನ್ನುವುದನ್ನು ಅಧ್ಯಯನವು ಕಂಡುಕೊಂಡಿದೆ. ಮುಸ್ಲಿಮ್ ಅಮೆರಿಕನ್ನರ ಬಗ್ಗೆ ಧನಾತ್ಮಕ ವರದಿಗಳನ್ನು ಪ್ರಕಟಿಸುವ ಮೂಲಕ ಪತ್ರಕರ್ತರು ಸಕ್ರಿಯ ಬದಲಾವಣೆಯನ್ನು ಮಾಡಬಹುದು. ಮುಸ್ಲಿಮ್ ಸಂಬಂಧಿತ ಭಯೋತ್ಪಾದಕ ದಾಳಿಗಳ ಬಗ್ಗೆ ವರದಿ ಮಾಡುವಾಗ ವರದಿಗಾರರು ಇಂತಹ ಕೃತ್ಯಗಳಿಗೆ ತಮ್ಮ ವಿರೋಧದ ಬಗ್ಗೆ ಮುಸ್ಲಿಮ್ ಅಮೆರಿಕನ್ನರೊಂದಿಗೆ ಮಾತನಾಡಿ ಅವರ ಅಭಿಪ್ರಾಯಗಳನ್ನು ಬರೆಯಬೇಕು ಎಂದು ಅಧ್ಯಯನವು ಹೇಳಿದೆ. ಅಲ್ಲದೆ ಮುಸ್ಲಿಮ್ ಅಮೆರಿಕನ್ನರೂ ಇಂತಹ ಭಯೋತ್ಪಾದನೆಯ ವಿರುದ್ಧ ಮೈಚಳಿ ಬಿಟ್ಟು ಮಾತನಾಡುವ ಮೂಲಕ ಮುಸ್ಲಿಮರ ಕುರಿತ ನಕಾರಾತ್ಮಕ ಭಾವನೆಯನ್ನು ನಿವಾರಿಸಲು ನೆರವಾಗಬಹುದಾಗಿದೆ ಎಂದು ವರದಿಯು ಹೇಳಿದೆ.







