ಮುಸ್ಲಿಮ್ ಬ್ರದರ್‌ಹುಡ್‌ನ 149 ಕಾರ್ಯಕರ್ತರ ಗಲ್ಲು ರದ್ದು: ಹೊಸದಾಗಿ ವಿಚಾರಣೆ ನಡೆಸಲು ನ್ಯಾಯಾಲಯ ಆದೇಶ
ಕೈರೋ, ಫೆ. 3: ನಿಷೇಧಿತ ಮುಸ್ಲಿಂ ಬ್ರದರ್‌ಹುಡ್‌ನ 149 ಕಾರ್ಯಕರ್ತರಿಗೆ ವಿಚಾರಣಾ ನ್ಯಾಯಾಲಯವೊಂದು ನೀಡಿದ್ದ ಮರಣ ದಂಡನೆಯನ್ನು ಈಜಿಪ್ಟ್‌ನ ಮೇಲ್ಮನವಿ ನ್ಯಾಯಾಲಯವೊಂದು ಬುಧವಾರ ರದ್ದುಪಡಿಸಿದೆ. ಅದೂ ಅಲ್ಲದೆ, ಈ ಪ್ರಕರಣದ ಮರು ವಿಚಾರಣೆ ನಡೆಸುವಂತೆಯೂ ಅದು ಆದೇಶಿಸಿದೆ.
2013ರಲ್ಲಿ ಪೊಲೀಸ್ ಠಾಣೆಯೊಂದರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ 13 ಪೊಲೀಸರನ್ನು ಕೊಂದ ಪ್ರಕರಣ ಇದಾಗಿದೆ.
2013ರಲ್ಲಿ ರಬಾ ಮತ್ತು ನಹ್ದಗಳಲ್ಲಿ ನಡೆದ ಮುಸ್ಲಿಮ್‌ಬ್ರದರ್‌ಹುಡ್‌ನ ಸಮಾವೇಶಗಳ ಬಳಿಕ, ಅದರ ಕಾರ್ಯಕರ್ತರು ಕೆರ್ಡಸದ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಪೊಲೀಸ್ ಮತ್ತು ಖಾಸಗಿ ವಾಹನಗಳ ಮೇಲೆ ದಾಳಿ ನಡೆಸಿದ್ದರು. ಹಲವು ಮುಸ್ಲಿಮ್ ಬ್ರದರ್‌ಹುಡ್ ಕಾರ್ಯಕರ್ತರೂ ಈ ಘರ್ಷಣೆಯಲ್ಲಿ ಮೃತರಾಗಿದ್ದರು.
ವಿಚಾರಣಾ ನ್ಯಾಯಾಲಯವೊಂದು 2015ರ ಫೆಬ್ರವರಿಯಲ್ಲಿ ತೀರ್ಪು ನೀಡಿ, ಸಾಮೂಹಿಕ ಮರಣ ದಂಡನೆಗಳನ್ನು ವಿಧಿಸಿತ್ತು. ನ್ಯಾಯಾಲಯವು 149 ಮುಸ್ಲಿಮ್ ಬ್ರದರ್‌ಹುಡ್ ಕಾರ್ಯಕರ್ತರಿಗೆ ಮರಣ ದಂಡನೆ ವಿಧಿಸಿತ್ತು. ಇತರ 34 ಮಂದಿಯ ವಿಚಾರಣೆ ಅವರ ಅನುಪಸ್ಥಿತಿಯಲ್ಲಿ ನಡೆದಿತ್ತು ಹಾಗೂ ಅವರಿಗೂ ಮರಣ ದಂಡನೆ ವಿಧಿಸಲಾಗಿತ್ತು.
ಅದೇ ವೇಳೆ, ನ್ಯಾಯಾಲಯವು ಒಂದು ಮಗುವಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇಬ್ಬರನ್ನು ಖುಲಾಸೆಗೊಳಿಸಲಾಗಿತ್ತು.
ಈಜಿಪ್ಟ್‌ನ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯ ಪದಚ್ಯುತಿಯ ಬಳಿಕ ನಡೆದ ರಾಜಕೀಯ ಹಿಂಸಾಚಾರಕ್ಕಾಗಿ ಈಗಾಗಲೇ ಏಳು ಮಂದಿಯನ್ನು ಗಲ್ಲಿಗೇರಿಸಲಾಗಿದೆ.
ಮುರ್ಸಿಯ ಪದಚ್ಯುತಿ ಬಳಿಕ, ಮುಸ್ಲಿಮ್ ಬ್ರದರ್‌ಹುಡ್‌ನ ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ಸರಕಾರ ಕಾರ್ಯಾಚರಣೆ ನಡೆಸುತ್ತಿದೆ. ಸಾವಿರಾರು ಮಂದಿ ಜೈಲು ಪಾಲಾಗಿದ್ದು, ನೂರಾರು ಮಂದಿ ವಿವಿಧ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.





