ಹಾಕಿ ತಂಡದ ನಾಯಕ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ

ಹೊಸದಿಲ್ಲಿ, ಫೆ.3: ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಬ್ರಿಟನ್‌ನ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಬಗ್ಗೆ ಲಿಖಿತ ದೂರು ನೀಡಿದ್ದಾರೆ.
ಖ್ಯಾತ ಮಿಡ್‌ಫೀಲ್ಡ್ ಆಟಗಾರ ತನಗೆ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್ ಸಂದರ್ದಲ್ಲಿ ಅವರ ಪರಿಚಯವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಅವರ ಜತೆ ಸದಾ ತೊಡಗಿಸಿಕೊಂಡಿದ್ದೇನೆ. 2015ರಲ್ಲಿ ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಸಿಂಗ್ ಒತ್ತಡ ಹೇರಿದ್ದಾರೆ ಎಂಬ ವಿಚಾರ ಬಹಿರಂಗಪಡಿಸಿದ್ದಾರೆ.
ಮೊದಲ ಬಾರಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರ ಪರಿಚಯವಾಯಿತು. ಬಳಿಕ ನಾವು ಪರಸ್ಪರ ಅರಿತುಕೊಂಡೆವು. ನಮ್ಮ ನಿಶ್ಚಿತಾರ್ಥ ಕೂಡಾ ಮುಗಿದಿದೆ. 2015ರಲ್ಲಿ ನಾನು ಅವರಿಂದ ಗರ್ಭಿಣಿಯಾದೆ. ಆದರೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಅವರು ಒತ್ತಡ ಹೇರಿದರು. ನನ್ನ ಇಚ್ಛೆಗೆ ವಿರುದ್ಧವಾಗಿ ಯಾರ ನೆರವೂ ಪಡೆಯದೇ ಗರ್ಭಪಾತ ಮಾಡಿಸಿಕೊಂಡೆ ಎಂಬ ಆಕೆಯ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಬಗ್ಗೆ ಲಿಖಿತ ದೂರು ದಾಖಲಾಗಿದ್ದರೂ, ಇನ್ನೂ ಎಫ್‌ಐಆರ್ ದಾಖಲಿಸಿಲ್ಲ ಎಂದು ಲೂಧಿಯಾನ ಪೊಲೀಸ್ ಆಯುಕ್ತ ಪಿ.ಎಸ್.ಉಮ್ರಾನಂಗಲ್ ಹೇಳಿದ್ದಾರೆ.
ದೂರನ್ನು ಪರಿಶೀಲಿಸಲಾಗುತ್ತಿದೆ. ಆ ಮಹಿಳೆ ರಾಷ್ಟ್ರೀಯ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಸರ್ದಾರ್‌ಸಿಂಗ್ ಅವರ ತಾಯಿಯ ಕುಟುಂಬ ಬೈನಿಸಾಹಿಬ್ ಬಳಿ ವಾಸವಾಗಿದೆ. ಇಲ್ಲಿ ನಡೆದ ಧಾರ್ಮಿಕ ಸಮಾರಂವೊಂದರ ವೇಳೆ ತಾವು ಪರಸ್ಪರ ಬೇಟಿ ಮಾಡಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಇದುವರೆಗೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಅವರು ವಿವರಿಸಿದ್ದಾರೆ.
ಇದೀಗ ಸರ್ದಾರ್ ಸಿಂಗ್ ತನ್ನನ್ನು ನಿರ್ಲಕ್ಷಿಸುತ್ತಿದ್ದು, ತನ್ನನ್ನು ತೊರೆದಿದ್ದಾರೆ. ಗರ್ಭಪಾತ ಮಾಡಿಸಿಕೊಂಡ ಬಳಿಕ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ಆ ಬಳಿಕ ತನಗೆ ಭಾವನಾತ್ಮಕ, ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಈಗ ನಡೆಯುತ್ತಿರುವ ಹಾಕಿ ಇಂಡಿಯಾ ಲೀಗ್‌ನಲ್ಲಿ ಸರ್ದಾರ್ ಸಿಂಗ್ ಪಂಜಾಬ್ ವಾರಿಯರ್ಸ್ ಪರ ಆಡುತ್ತಿದ್ದಾರೆ.







