ಸುಳ್ಯ : ಕುಮ್ಕಿ ಹಕ್ಕು-ಡಿಸಿಗೆ ನೀಡಿದ ಅಧಿಕಾರ ಹಿಂದಕ್ಕೆ ಪಡೆಯಲು ಆಗ್ರಹ
ಫೆಬ್ರವರಿ 10ರಂದು ಸುಳ್ಯದಲ್ಲಿ ರೈತರ ಸಭೆ
ಸುಳ್ಯ: ಕಾನ, ಬಾಣೆ, ಕುಮ್ಕಿ ಹಕ್ಕಿನ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದ ಅಧಿಕಾರವನ್ನು ರದ್ದು ಮಾಡಬೇಕು ಹಾಗೂ ಜಮೀನನ್ನು ರೈತರ ಕೈಯಿಂದ ವಶಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ಹೋರಾಟ ರೂಪಿಸುವ ಸಲುವಾಗಿ ರೈತರ ಸಭೆ ಫೆಬ್ರವರಿ 10ರಂದು ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುತ್ತೂರಿನ ಭಾರತೀಯ ಕಿಸಾನ್ ಸಂಘದ ಕುಮ್ಕಿ ಹಕ್ಕು ಹೋರಾಟ ಸಮಿತಿಯ ಮುಖಂಡ ಎಂ.ಜಿ.ಸತ್ಯನಾರಾಯಣ, ಫೆ.10ರಿಂದ 17ರವರಗೆ ಜಿಲ್ಲೆಯ ವಿವಿಧೆಡೆ ರೈತರ ಸಭೆಗಳನ್ನು ಆಯೋಜಿಸಿದ್ದು, ಕುಮ್ಕಿ ಜಮೀನು ಹೊಂದಿರುವ ರೈತರು ಇದರಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಕುಮ್ಕಿ ಹಕ್ಕನ್ನು ರದ್ದು ಮಾಡಿ ಕಡಬ ಹಾಗೂ ಉಪ್ಪಿನಂಗಡಿಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಭೂಸ್ವಾಧೀನಕ್ಕೆ ನೋಟೀಸ್ ನೀಡಲು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಕುರಿತು ಎಲ್ಲಾ ರೈತರು ತೀವ್ರವಾದ ಹೋರಾಟವನ್ನು ನಡೆಸುವ ಅಗತ್ಯವಿದೆ. 1885ರಿಂದ 2004ರವರೆಗೆ ಕುಮ್ಕಿ ಜಮೀನು ರೈತರ ಹೆಸರಿನಲ್ಲಿದ್ದು, ಅದಕ್ಕೆ ಅವರು ತೆರಿಗೆಯನ್ನೂ ಪಾವತಿಸುತ್ತಿದ್ದರು. ಆ ಬಳಿಕ ತೆರಿಗೆ ಸ್ವೀಕರಿಸುವುದನ್ನು ಸರ್ಕಾರ ಸ್ಥಗಿತಗೊಳಿಸಿ ಆರ್‌ಟಿಸಿಯಲ್ಲಿ ಸರ್ಕಾರದ ಜಮೀನು ಎಂದು ನಮೂದಿಸಿದೆ. ಈ ಜಮೀನನ್ನು ಅಕ್ರಮ ಸಕ್ರಮದಲ್ಲಿ ವಿತರಿಸುತ್ತಿದೆ. ತೆರಿಗೆ ಕಟ್ಟಿದ ಅದರ ಹಕ್ಕುದಾರರಿಗೆ ನೀಡದೇ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದವರು ಆರೋಪಿಸಿದರು.
ಸುಳ್ಯ ತಾಲೂಕಿನಲ್ಲಿ 2,11,386 ಎಕರೆ ಕುಮ್ಕಿ ಜಮೀನಿದ್ದು, 10,746 ಫಲಾನುಭವಿಗಳಿದ್ದಾರೆ. ಹಲವರು ಒಂದು ಎಕರೆಗೂ ಕಡಿಮೆ ವರ್ಗ ಜಮೀನು ಹೊಂದಿದ್ದು, 5ರಿಂದ 10 ಎಕರೆ ಕುಮ್ಕಿ ಜಮೀನು ಹೊಂದಿದ್ದಾರೆ. 50 ಎಕರೆಗಿಂತ ಹೆಚ್ಚು ಕುಮ್ಕಿ ಜಮೀನು ಹೊಂದಿರುವ ಬೆರಳೆಣಿಕೆಯ ರೈತರು ಮಾತ್ರ ಇದ್ದಾರೆ. ಕನಿಷ್ಠ 10 ಎಕರೆ ಕುಮ್ಕಿ ಜಮೀನನ್ನು ರೈತರ ಹೆಸರಿಗೆ ಖಾತೆ ಮಾಡಿಸಿ ಹೆಚ್ಚುವರಿ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಲು ರೈತರ ಒಪ್ಪಿಗೆ ಇದೆ. ಈ ಕುರಿತು ಹಲವು ಬಾರಿ ಸರ್ಕಾರದೊಂದಿಗೆ ಮಾತುಕತೆ ನಡೆದರೂ ರೈತರ ಲಾಭಿ ಅಲ್ಲಿ ಕೆಲಸ ಮಾಡಲಿಲ್ಲ ಎಂದವರು ಹೇಳಿದರು.
ಮುಂದಿನ ಬಜೆಟ್‌ನಲ್ಲಿ ರಬ್ಬರ್‌ಗೆ ಬೆಂಬಲ ಬೆಲೆ ಘೋಷಿಸಲು ಹಣವನ್ನು ಕಾಯ್ದಿಡುವಂತೆ ಸಮಿತಿ ಮುಖಂಡ ಅಡ್ಡಂತಡ್ಕ ದೇರಣ್ಣ ಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಕುಮ್ಕಿ ಹೋರಾಟ ಸಮಿತಿಯ ರಾಮಚಂದ್ರ ನೆಕ್ಕಿಲ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸುಬ್ರಾಯ, ರೈತ ಮುಖಂಡ ವಸಂತ ಭಟ್ ತೊಡಿಕಾನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







