ಭೋಜಶಾಲಾ ವಿವಾದ: ವಸಂತ ಪಂಚಮಿಯಂದು ದಿನವಿಡೀ ಪೂಜಾ ಅವಕಾಶಕ್ಕೆ ಹಿಂದುಗಳ ಆಗ್ರಹ

ಇಂದೋರ,ಫೆ.4: ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯ ಅಧೀನದಲ್ಲಿರುವ ಧಾರ್ ಜಿಲ್ಲೆಯ ಭೋಜಶಾಲಾದಲ್ಲಿ ಪಂಚಮಿಯ ದಿನವಾಗಿರುವ ಫೆ.12ರಂದು ‘‘ನಸುಕಿನಿಂದ ಸಂಜೆಯವರೆಗೆ’’ ಪೂಜೆಯನ್ನು ಸಲ್ಲಿಸಲು ಅವಕಾಶ ನೀಡುವಂತೆ ಭೋಜ್ ಉತ್ಸವ ಸಮಿತಿಯು ಆಗ್ರಹಿಸಿದೆ.
ಕೆಲವೇ ದಿನಗಳ ಹಿಂದೆ ಆದೇಶವೊಂದನ್ನು ಹೊರಡಿಸಿರುವ ಎಎಸ್‌ಐ,ಶುಕ್ರವಾರ ಬರುವ ವಸಂತ ಪಂಚಮಿಯಂದು ಭೋಜಶಾಲಾದಲ್ಲಿ ಮುಸ್ಲಿಮರಿಗೆ ನಮಾಝ್ ಸಲ್ಲಿಸಲು ಮಧ್ಯಾಹ್ನ 1ರಿಂದ 3ಗಂಟೆಯವರೆಗೆ ಹಾಗೂ ಹಿಂದುಗಳಿಗೆ ಪೂಜೆ ಸಲ್ಲಿಸಲು ಸೂರ್ಯೋದಯದಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು 3.30ರಿಂದ ಸೂರ್ಯಾಸ್ತದವರೆಗೆ ಸಮಯವನ್ನು ನಿಗದಿಗೊಳಿಸಿದೆ.
ವಸಂತ ಪಚಮಿಯಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಿರಂತರವಾಗಿ ಪೂಜೆ ಸಲ್ಲಿಸಲು ನಮಗೆ ಅನುಮತಿ ನೀಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ಧಾರ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಎಎಸ್‌ಐ ಆದೇಶವನ್ನು ಪಾಲಿಸಬೇಕೆಂಬ ಬದ್ಧತೆ ರಾಜ್ಯ ಸರಕಾರಕ್ಕಿಲ್ಲ ಎಂದು ಸಮಿತಿ ಸಂಚಾಲಕ ವಿಜಯ ಸಿಂಗ್ ರಾಠೋಡ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪುರಾತತ್ವ ಸ್ಮಾರಕವಾಗಿರುವ ಕಟ್ಟಡದ ರಕ್ಷಣೆಯಷ್ಟೇ ಎಎಸ್‌ಐ ಹೊಣೆಗಾರಿಕೆಯಾಗಿದೆ. ಪೂಜಾ ವೇಳಾಪಟ್ಟಿಯನ್ನು ಹೊರಡಿಸುವ ಅಧಿಕಾರ ಅದಕ್ಕಿಲ್ಲ ಎಂದು ಅವರು ಪ್ರತಿಪಾದಿಸಿದರು.
ವಸಂತ ಪಂಚಮಿಯಂದು ಭೋಜಶಾಲಾದಲ್ಲಿ ತಮ್ಮ ಧರ್ಮಗಳ ಪ್ರಕಾರ ಪೂಜೆ-ಪ್ರಾರ್ಥನೆ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಪರಸ್ಪರ ಒಪ್ಪಿಗೆಯಾಗುವ ಪರಿಹಾರವೊಂದನ್ನು ಕಂಡುಕೊಳ್ಳಲು ಉಭಯ ಸಮುದಾಯಗಳಿಗೂ ಸಾಧ್ಯವಾಗಿಲ್ಲ. ಹೀಗಾಗಿ ಕಳೆದೊಂದು ತಿಂಗಳಿನಿಂದಲೂ ಜಿಲ್ಲೆಯಲ್ಲಿ ಉದ್ವಿಗ್ನತೆ ಹೆಪ್ಪುಗಟ್ಟುತ್ತಿದೆ.
ಭೋಜಶಾಲಾವನ್ನು ಹಿಂದುಗಳು ವಾಗ್ದೇವಿ(ಸರಸ್ವತಿ)ಯ ಮಂದಿರವೆಂದು ನಂಬಿದ್ದರೆ,ಮುಸ್ಲಿಮರು ಅದನ್ನು ಕಮಾಲ್ ವೌಲಾ ಮಸೀದಿಯೆಂದು ಪರಿಗಣಿಸುತ್ತಾರೆ.
ಈ ಹಿಂದೆಯೂ ವಸಂತ ಪಂಚಮಿ ಶುಕ್ರವಾರ ಬಂದಾಗಲೆಲ್ಲ ಧಾರ್ ನಗರದಲ್ಲಿ ಉದ್ವಿಗ್ನತೆ ತಲೆದೋರಿತ್ತು. ಒಮ್ಮೆ ನಿಗದಿತ ಸಮಯದಲ್ಲಿ ನಮಾಝ್ ನಡೆಯುವಂತಾಗಲು ಆಡಳಿತವು ಕರ್ಫ್ಯೂ ಜಾರಿಗೊಳಿಸಿತ್ತು.
ವಸಂತ ಪಂಚಮಿಯಂದು ಉಭಯ ಸಮುದಾಯಗಳಿಗೂ ಭೋಜಶಾಲಾದಲ್ಲಿ ಪ್ರವೇಶವು ಉಚಿತವಾಗಿರುತ್ತದೆ.
ಸಾಮಾನ್ಯ ದಿನಗಳಲ್ಲಿ ಹಿಂದುಗಳಿಗೆ ಪೂಜೆ ಸಲ್ಲಿಸಲು ಮಂಗಳವಾರಗಳಂದು ಮತ್ತು ಮುಸ್ಲಿಮರಿಗೆ ನಮಾಝ್ ಮಾಡಲು ಶುಕ್ರವಾರಗಳಂದು ಅವಕಾಶ ನೀಡಲಾಗುತ್ತದೆ. ಉಳಿದ ದಿನಗಳಲ್ಲಿ ಎಲ್ಲರಿಗೂ ಪ್ರವೇಶಾವಕಾಶವಿರುತ್ತದೆ.





