ಹೊಸದಿಲ್ಲಿ: ತಾಂಜಾನಿಯಾ ಮಹಿಳೆಯ ಮೇಲೆ ದಾಳಿ ಪ್ರಕರಣ ರಾಜ್ಯ ಸರಕಾರದಿಂದ ವರದಿ ಕೇಳಿದ ಕೇಂದ್ರ
ಹೊಸದಿಲ್ಲಿ,ಫೆ.4: ತಾಂಜಾನಿಯಾದ ಮಹಿಳೆಯೋರ್ವಳ ಮೇಲಿನ ಹಲ್ಲೆ ಪ್ರಕರಣದಿಂದ ಕಳವಳಗೊಂಡಿರುವ ಕೇಂದ್ರವು ಗುರುವಾರ ಕರ್ನಾಟಕ ಸರಕಾರದಿಂದ ವರದಿಯನ್ನು ಮತ್ತು ದುಷ್ಕರ್ಮಿಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ವಿವರಗಳನ್ನು ಕೇಳಿದೆ.
ಮಹಿಳೆಯ ರಕ್ಷಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಕೇಂದ್ರ ಗೃಹಸಚಿವಾಲಯವು ವರದಿಯನ್ನು ಕೇಳಿದೆ. ಘಟನೆಯಲ್ಲಿ ವಿದೇಶಿ ಪ್ರಜೆ ಭಾಗಿಯಾಗಿರುವುದರಿಂದ ಕೇಂದ್ರ ಸರಕಾರವು ಅಗತ್ಯ ಕ್ರಮವನ್ನು ಕೈಗೊಳ್ಳಲು ಸಾಧ್ಯವಾದಷ್ಟು ಶೀಘ್ರ ವರದಿಯನ್ನು ರವಾನಿಸುವಂತೆ ಸಚಿವಾಲಯವು ತಾಕೀತು ಮಾಡಿದೆ.
ರವಿವಾರ ತಡರಾತ್ರಿ ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಸುಡಾನಿ ಪ್ರಜೆಯೋರ್ವ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಮಹಿಳೆಯೋರ್ವಳು ಸಾವನ್ನಪ್ಪಿದ ಬಳಿಕ ಉದ್ರಿಕ್ತ ಗುಂಪೊಂದು 21ರ ಹರೆಯದ ತಾಂಜಾನಿಯಾ ವಿದ್ಯಾರ್ಥಿನಿಯನ್ನು ಥಳಿಸಿ ವಿವಸ್ತ್ರಗೊಳಿಸಿತ್ತು. ಅಪಘಾತವೆಸಗಿದ್ದು ಇದೇ ಮಹಿಳೆ ಎಂಬ ತಪ್ಪು ಗ್ರಹಿಕೆಯಿಂದ ಗುಂಪು ಈ ಕೃತ್ಯವನ್ನೆಸಗಿತ್ತು ಎನ್ನಲಾಗಿದೆ.
ಅಪಘಾತ ಸ್ಥಳವನ್ನು ತಲುಪಿದ ಕಾರಿನಲ್ಲಿ ತನ್ನ ಮೂವರು ಸ್ನೇಹಿತೆಯರೊಂದಿಗೆ ಕುಳಿತಿದ್ದ ಯುವತಿಯನ್ನು ಹೊರಗೆಳೆದ ಗುಂಪು ಆಕೆಯ ಮೇಲೆ ಹಲ್ಲೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯು ಗಂಭೀರ ರಾಜತಾಂತ್ರಿಕ ತಿರುವನ್ನು ಪಡೆದುಕೊಂಡಿದ್ದು, ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಐವರನ್ನು ಬಂಧಿಸಲಾಗಿದೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಘಟನೆಯ ಕುರಿತಂತೆ ತನ್ನೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದರು. ಸ್ವರಾಜ್ ಅವರಿಗೆ ವರದಿಯೊಂದನ್ನು ಕಳುಹಿಸಲಾಗುವುದು ಎಂದರು.
ಘಟನೆಯ ಕುರಿತು ದೂರನ್ನು ತಕ್ಷಣಕ್ಕೆ ಏಕೆ ದಾಖಲಿಸಿಕೊಂಡಿರಲಿಲ್ಲ ಎನ್ನುವುದರ ಬಗ್ಗೆ ವಿಚಾರಣೆ ನಡೆಸುವಂತೆ ತಾನು ಪೊಲೀಸರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು. ಅಧಿಕಾರಿಗಳು ತಪ್ಪು ಮಾಡಿದ್ದಿದ್ದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆಯೂ ಆದೇಶಿಸಿದ್ದೇನೆ ಎಂದರು.
ಇದೊಂದು ''ಲಜ್ಜಾಸ್ಪದ ಘಟನೆ'' ಎಂದು ಬಣ್ಣಿಸಿರುವ ಸ್ವರಾಜ್,ತಪ್ಪಿತಸ್ಥರಿಗೆ ಅತ್ಯಂತ ಕಠಿಣ ದಂಡನೆಯಾಗಬೇಕೆಂದು ಬಯಸಿದ್ದಾರೆ.
ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ ಗಾಂಧಿಯವರು ಸಹ ರಾಜ್ಯ ಸರಕಾರದಿಂದ ವರದಿಯನ್ನು ಕೇಳಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ತಿಳಿಸಿದ್ದಾರೆ.
ವಿಚಾರಣೆಯ ಬಳಿಕ ಇನ್ನಷ್ಟು ಬಂಧನಗಳು ನಡೆಯಲಿವೆ ಎಂದು ರಾಜ್ಯದ ಗೃಹಸಚಿವ ಜಿ.ಪರಮೇಶ್ವರ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಂಜಾನಿಯಾ ಮಹಿಳೆಯನ್ನು ಹೆಸರಿಸಿದ ಅವರು, ಆಕೆಯನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು ಎನ್ನುವುದನ್ನು ನಿರಾಕರಿಸಿದರು. ಖಂಡಿತವಾಗಿಯೂ ಇದು ಜನಾಂಗೀಯ ದಾಳಿಯಲ್ಲ ಎಂದು ಅವರು ಹೇಳಿದರು.







