ದುಬೈ : ‘ಪೋರ್ಬ್ಸ್ ಮಿಡ್ಲ್ ಈಸ್ಟ್’ ಮುಖಪುಟದಲ್ಲಿ ತುಂಬೆ ಮೊಯ್ದಿನ್

ಯುಎಇಯಲ್ಲಿ ಮಂಗಳೂರಿಗನ ಸಾಧನೆ ಬಗ್ಗೆ ಅಗ್ರ ಲೇಖನ ಪ್ರಕಟಿಸಿದ ಪ್ರತಿಷ್ಠಿತ ನಿಯತಕಾಲಿಕೆ
ದುಬೈ, ಜ.4:ಯುಎಇ ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್‌ರ ಬಗ್ಗೆ ಹಣಕಾಸು ಮತ್ತು ಆರ್ಥಿಕ ವ್ಯವಹಾರಕ್ಕೆ ಸಂಬಂಧಿ ಸಿದ ಪ್ರತಿಷ್ಠಿತ ನಿಯತಕಾಲಿಕೆ ‘ಫೋರ್ಬ್ಸ್ ಮಿಡ್ಲ್ ಈಸ್ಟ್ ’ ಈ ಬಾರಿಯ ಸಂಚಿಕೆಯಲ್ಲಿ ಮುಖಪುಟ ಲೇಖನ ಪ್ರಕಟಿಸಿದೆ. ‘ಹೆಲ್ತಿ ಚಾಯ್ಸಿ’ ಎಂಬ ಶೀರ್ಷಿಕೆಯ ಈ ಲೇಖನದಲ್ಲಿ ಅಜ್ಮಾನ್‌ನಲ್ಲಿ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು) ಪ್ರಾರಂಭಿಸಿದ ದಿನದಿಂದ ಈಗ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ ಸಾಧಕನಾಗಿ ಮೂಡಿಬಂದಿರುವ ಮೊಯ್ದಿನ್ ಅವರ ಯಶೋಗಾಥೆಯನ್ನು ಸವಿವರವಾಗಿ ನೀಡಲಾಗಿದೆ.
ತುಂಬೆ ಮೊಯ್ದಿನ್ ಅವರು ಮಂಗಳೂರು ಸಮೀಪದ ತುಂಬೆ ಗ್ರಾಮದ ಪ್ರತಿಷ್ಠಿತ ಉದ್ಯಮಿ ಹಾಗು ಧಾರ್ಮಿಕ, ಸಾಮಾಜಿಕ ಮುಂದಾಳು ಬಿ. ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಸುಪುತ್ರ.
‘ತುಂಬೆ ಸಮೂಹ ಸಂಸ್ಥೆ ಯುಎಇಯ ಅತ್ಯಂತ ದೊಡ್ಡ ಆರೋಗ್ಯ ಜಾಲವನ್ನು ಹೊಂದಿದೆ. ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ’ ಎಂದು ಬಣ್ಣಿಸಿರುವ ನಿಯತಕಾಲಿಕ ತುಂಬೆ ಮೊಯ್ದಿನ್ ಸದ್ಯ 1.8 ಬಿಲಿಯನ್ ಡಾಲರ್ ವೌಲ್ಯದ ಸಂಪತ್ತು ಹೊಂದಿದ್ದಾರೆ ಎಂದು ಅಂದಾಜು ಮಾಡಿದೆ.
ಜಿಎಂಯು ಮೂಲಕ ಈವರೆಗೆ 2000 ವಿದ್ಯಾರ್ಥಿಗಳು ವೈದ್ಯಕೀಯ ಪದವೀಧರರಾಗಿದ್ದಾರೆ. ಸದ್ಯ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ಪೈಕಿ ಶೇ.36 ಅರಬ್, ಶೇ.32 ಏಶಿಯನ್ನರು, ಶೇ.22ಆಫ್ರಿಕಾದವರು ಉಳಿದವರು ಯುರೂಪ್ ಹಾಗೂ ಏಷ್ಯಾದ ಇತರ ಪ್ರದೇಶಗಳವರು. 22 ದೇಶಗಳ 162 ವಿಷಯ ತಜ್ಞರು ಈ ವಿ.ವಿಯಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿದ್ದಾರೆ. ಯುಎಇನ ಒಟ್ಟು 19% ವೈದ್ಯರು ತುಂಬೆ ಸಮೂಹ ಸಂಸ್ಥೆಗಳ ಮೂಲಕ ತರಬೇತುಗೊಳ್ಳುತ್ತಿದ್ದು, ಸುಮಾರು 1,800 ಮಂದಿ ಪ್ರತಿದಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಕ್ತ ಅಜ್‌ಮನ್, ದುಬೈ, ಶಾರ್ಜಾ, ಫುಜೈರಾಗಳಲ್ಲಿ ಸಂಸ್ಥೆ ಆರೋಗ್ಯ ಸೇವೆಯನ್ನು ನೀಡುತ್ತಿದೆ.
2017ರಲ್ಲಿ ತುಂಬೆ ಸಮೂಹ ಸಂಸ್ಥೆ ಘಾನದಲ್ಲಿ ತೆರೆಯಲಿರುವ ಮೆಡಿಕಲ್ ಸ್ಕೂಲ್, ಭಾರತದ ಹೈದರಾಬಾದ್‌ನಲ್ಲಿ ತೆರೆಯಲಿರುವ ಆಸ್ಪತ್ರೆ, ಸೌದಿ ಅರೇಬಿಯ ,ಕತರ್, ಮುಂಬೈ,ಬೆಂಗಳೂರು ಮೊದಲಾದ ಕಡೆ ಆರಂಭಿಸಲಾಗುವ ಸಮೂಹ ಸಂಸ್ಥೆಯ ಆಸ್ಪತ್ರೆಗಳ ಯೋಜನೆಯ ಬಗ್ಗೆ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ತುಂಬೆ ಮೊಯ್ದಿನ್‌ರ ಪುತ್ರರಾದ ಹೆಲ್ತ್ ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್, ಕನಸ್ಟ್ರಕ್ಷನ್, ರಿನೋವೇಶನ್ ನಿರ್ವಹಣಾ ವಿಭಾಗದ ನಿರ್ದೇಶಕ ಅಕ್ರಮ್ ಮೊಯ್ದಿನ್‌ರ ಪಾತ್ರದ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ತುಂಬೆ ಮೊಯ್ದಿನ್‌ರ ಸಮರ್ಥ ನಾಯಕತ್ವದಲ್ಲಿ ಹಂತಹಂತವಾಗಿ 13 ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟ ದಲ್ಲಿ ಉದ್ಯಮ ವಿಸ್ತರಿಸಿರುವ ತುಂಬೆ ಸಮೂಹ ಸಂಸ್ಥೆ ಮುಂದಿನ ಎರಡು ವರ್ಷಗಳಲ್ಲಿ 600 ಮಂದಿಗೆ ಹಾಗು 2020 ರೊಳಗೆ 15,000 ಜನರಿಗೆ ಉದ್ಯೋಗ ಕಲ್ಪಿಸಲಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.







