ಘೋಷಣೆ ಕಾಗದದ ಕಂತೆಯಾಗದಿರಲಿ
ಈಗ ಬೆಂಗಳೂರಲ್ಲಿ ವಿಶ್ವದ ಪ್ರಮುಖ ಉದ್ಯಮಿಗಳದ್ದೇ ಓಡಾಟ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿದ ನಂತರ ಇದೇ ಮೊದಲ ಬಾರಿಗೆ ‘ಜಿಮ್ ಸಮಾವೇಶ’ ನಡೆಯುತ್ತಿದೆ. ರಾಜ್ಯ ಸರಕಾರ ಈ ಸಮಾವೇಶದ ಮೂಲಕ ಹೂಡಿಕೆ ಸ್ನೇಹಿ ಎಂದು ಸಾಬೀತುಪಡಿಸಲು ಹಾಗೂ ಉದ್ಯಮಿಗಳನ್ನು ಸೆಳೆಯಲು ಶತಪ್ರಯತ್ನ ಮಾಡಿದೆ. 2000ದಲ್ಲಿ ನಡೆದ ಮೊದಲ ಜಿಮ್, 2010ರಲ್ಲಿ ನಡೆದ ಎರಡನೆ ಜಿಮ್ ಹಾಗೂ 2012ರಲ್ಲಿ ನಡೆದ ಮೂರನೆ ಜಿಮ್‌ನಲ್ಲಿ ಆದ ಘೋಷಣೆಗಳು ಇನ್ನೂ ಪೂರ್ಣಗೊಂಡಿಲ್ಲ. ಇದರ ಬೆನ್ನಲ್ಲೇ ಇದೀಗ 4ನೆ ಜಿಮ್ ಸಮಾವೇಶದಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ, ವರ್ತುಲ ರಸ್ತೆ ಯೋಜನೆ ಆರಂಭ ವಿಚಾರ, ಸಬ್ ಆರ್ಬನ್ ರೈಲ್ವೆ, ಎಲಿವೇಟೆಡ್ ರೋಡ್ ಯೋಜನೆ, ‘ಅಮೃತನಗರ ಯೋಜನೆ’ಯಲ್ಲಿ ರಾಜ್ಯದ 27 ನಗರಗಳ ಅಭಿವೃದ್ಧಿ, ಡಿಸೆಂಬರ್‌ನಲ್ಲಿ ಶಿರಾಡಿ ಘಾಟ್ ಹಸಿರು ಟನಲ್ ಯೋಜನೆ ಆರಂಭ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ. ಆದರೆ ಇವು ನಿರೀಕ್ಷಿತ ಸಮಯದಲ್ಲಿ ಗುರಿ ಮುಟ್ಟುತ್ತಾ ಎನ್ನುವುದೇ ದೊಡ್ಡ ಪ್ರಶ್ನೆ. ಈ ಮಧ್ಯೆ ಈ ಸಮಾವೇಶವನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಮಾಡಿದ ಪ್ರತಿಭಟನೆ, ಅವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಹೊಣೆಗಾರಿಕೆ ಸಿದ್ದರಾಮಯ್ಯ ಸರಕಾರದ ಮೇಲಿದೆ. ಖಾಸಗಿ ಲಾಬಿಗೆ ಮಣಿಯದೇ ಖಾಸಗಿ ಕಂಪೆನಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಉದ್ಯೋಗ ಸಿಗುವಂತೆ ಮಾಡಬೇಕು. ಖಾಸಗಿ ವಲಯದಲ್ಲೂ ಮೀಸಲಾತಿ ಸಿಗುವಂತೆ ಸರಕಾರ ಮಾಡಬೇಕು. ಇಲ್ಲದಿದ್ದರೆ ಕೋಟಿ ಕೋಟಿ ಖರ್ಚು ಮಾಡಿ ನಡೆಸಿದ ಸಮಾವೇಶಕ್ಕೆ ಅರ್ಥವೇ ಇಲ್ಲದಂತಾಗುತ್ತದೆ.





