ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ - ಅಮಾಯಕ ವಿದ್ಯಾರ್ಥಿ ಮೇಲೆ ಸಿಸಿಬಿ ಪೊಲೀಸರ ದೌರ್ಜನ್ಯ

ಮಂಗಳೂರು, ಫೆ.4: ನಗರದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಖಾಸಗಿ ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಮಧ್ಯೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯರು ಗುರುವಾರ ಕೇರಳದ ಶೋರ್‌ನೂರ್‌ನಲ್ಲಿ ಪತ್ತೆಯಾಗಿದ್ದಾರೆ.
ಸಿಸಿಬಿ ಪೊಲೀಸರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ನಗರದ ಸ್ಟಾರ್ ಟ್ಯುಟೋರಿಯಲ್‌ನ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿ, ಕಸಬಾ ಬೆಂಗ್ರೆಯ ನಿವಾಸಿ ದಿ.ಅಬ್ದುಲ್ ಕರೀಮ್‌ರ ಪುತ್ರ ನಿಸಾರ್ (17) ಎಂದು ಗುರುತಿಸಲಾಗಿದೆ. ದೌರ್ಜನ್ಯಕ್ಕೀಡಾದ ನಿಸಾರ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಅಲೋಶಿಯಸ್ ಕಾಲೇಜಿನ ಪಿಯುಸಿ ವಿಭಾಗದ ವಿದ್ಯಾರ್ಥಿನಿಯರಿಬ್ಬರು ಫೆ.1ರಂದು ಕಾಲೇಜಿಗೆ ಹೋದವರು ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದರು.ಈ ಬಗ್ಗೆ ವಿದ್ಯಾರ್ಥಿನಿಯರ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರೊಂದಿಗೆ ಚಾಟ್ ಮಾಡಿದ್ದಾನೆಂಬ ಆರೋಪದ ಮೇಲೆ ಬಂದರು ಪೊಲೀಸರು ನಿಸಾರ್‌ನನ್ನು ಕಾಲೇಜಿನಿಂದ ಕರೆದುಕೊಂಡು ಹೋಗಿದ್ದು, ಮಾರನೆಯ ದಿನ ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಸಿಸಿಬಿ ಪೊಲೀಸರು ಈತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
‘ಫೆ.2ರಂದು ಬೆಳಗ್ಗೆ ಸುಮಾರು 9 ಗಂಟೆಗೆ ನಗರದ ಸ್ಟಾರ್ ಟ್ಯುಟೋರಿಯಲ್‌ಗೆ ಆಗಮಿಸಿದ ಬಂದರು ಪಿಎಸ್ಸೈ ಮದನ್ ತರಗತಿಯೊಳಗೆ ಬಂದು ನನ್ನನ್ನು ಕರೆದುಕೊಂಡು ಹೋಗಿ ಸಂಜೆಯವರೆಗೆ ಠಾಣೆಯಲ್ಲೇ ಕೂರಿಸಿದ್ದಾರೆ.ಸಂಜೆ ವಿಚಾರಣೆ ನಡೆಸಿ ಮಾರನೆ ದಿನ ಬರುವಂತೆ ಹೇಳಿದ್ದರು.ಅದರಂತೆ ನಾನು ಫೆ.3ರಂದು ನನ್ನ ಹಿರಿಯ ಸಹೋದರ ನಿಝಾಮ್‌ರೊಂದಿಗೆ ಬಂದರು ಠಾಣೆಗೆ ತೆರಳಿದ್ದೆ.ಬಂದರು ಪೊಲೀಸರು ನಮ್ಮಿಬ್ಬರನ್ನು ಸಿಸಿಬಿ ಪೊಲೀಸರ ಬಳಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನಿಝಾಮ್‌ನನ್ನು ಮನೆಗೆ ಹೋಗುವಂತೆ ತಿಳಿಸಿ ನನ್ನನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.ಬೆಳಗ್ಗೆ ಹೋದವನು ಸಂಜೆಯವರೆಗೂ ಸಿಸಿಬಿ ಪೊಲೀಸರ ವಶದಲ್ಲೇ ಇದ್ದೆ.ಅಪರಾಹ್ನ ಸುಮಾರು ಮೂರುವರೆ ಗಂಟೆಗೆ ಹೊತ್ತಿಗೆ ನಾಲ್ವರು ಸಿಸಿಬಿ ಪೊಲೀಸರು ಆಗಮಿಸಿ ಆ ಇಬ್ಬರು ವಿದ್ಯಾರ್ಥಿನಿಯರು ಎಲ್ಲಿದ್ದಾರೆ? ಎಂದುಕೇಳಿದ್ದಾರೆ. ನನಗೆ ಗೊತ್ತಿಲ್ಲ ಎನ್ನುತ್ತಿದ್ದಂತೆ ಓರ್ವ ಪೊಲೀಸ್ ನನ್ನ ಕೆನ್ನೆಗೆ ಬಾರಿಸಿದ್ದಾರೆ. ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ, ಅವರೆಲ್ಲಿದ್ದಾರೆಂದು ನನಗೆ ಗೊತ್ತಿಲ್ಲ ಎಂದೆ. ಅಲ್ಲಿದ್ದ ಪೊಲೀಸರು ನನ್ನ ಪ್ಯಾಂಟ್ ಮತ್ತು ಶರ್ಟ್‌ನ್ನು ಬಿಚ್ಚಿ ಮನಬಂದಂತೆೆ ಹಲ್ಲೆಮಾಡಿದ್ದಾರೆ. ಅಲ್ಲದೆ, ನನ್ನ ಪಾದಗಳಿಗೆ ಹಗ್ಗವನ್ನು ಕಟ್ಟಿ ಎಳೆದಾಡಿದ್ದಾರೆ. ಒಪ್ಪಿಕೊಳ್ಳುವಂತೆ ಬಲವಂತಪಡಿಸಿದ್ದಾರೆ. ಇದಾದ ಬಳಿಕ ಪೊಲೀಸರು ನಿನ್ನ ತಂದೆಯನ್ನು ಬರಲು ಹೇಳು ಎಂದರು. ನನ್ನ ತಂದೆ ನಿಧನ ಹೊಂದಿದ್ದಾರೆ ಎಂದಾಗ ನಿನ್ನ ತಾಯಿ ಮತ್ತು ನಿನ್ನ ಅಕ್ಕ ಇದ್ದರೆ ನನ್ನೊಂದಿಗೆ ಬರುವಂತೆ ಹೇಳು ಎಂದು ಪೊಲೀಸರು ಅನಾಗರಿಕವಾಗಿ ವರ್ತಿಸಿದ್ದಾರೆ ಎಂದು ನಿಸಾರ್ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಇದಾದ ಬಳಿಕ ಬಂದರು ಪೊಲೀಸರು ನನ್ನಲ್ಲಿ ಖಾಲಿ ಕಾಗದವೊಂದರಲ್ಲಿ ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ. ಸಹಿ ಮಾಡಿದ ಬಳಿಕ ಸಹಿಯ ಕೆಳಗೆ ದಿನಾಂಕ (ಫೆ.3ರ ಬದಲಿಗೆ) ಫೆ.2ಎಂದು ಬರೆಯುವಂತೆ ಸೂಚಿಸಿದ್ದಾರೆ.ಅದರಂತೆ ನಾನು ಸಹಿ ಹಾಕಿ ದಿನಾಂಕ ಬರೆದಿರುವುದಾಗಿ ನಿಸಾರ್ ತಿಳಿಸಿದ್ದಾರೆ.
*ಪ್ರಾಂಶುಪಾಲರ ಹೇಳಿಕೆ
ಕಾಲೇಜಿನಿಂದ ನಾಪತ್ತೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರು ಕೇರಳದ ಶೋರ್‌ನುರ್‌ನಲ್ಲಿ ಪತ್ತೆಯಾಗಿರುವುದು ಸಂತೋಷ ತಂದಿದೆ. ಅವರನ್ನು ಕೌನ್ಸೆಲಿಂಗ್ ನಡೆಸಿ, ಮುಂದಿನ ವಿದ್ಯಾಭ್ಯಾಸದ ಕಡೆಗೆ ಕಾಲೇಜಿನಿಂದ ಪೂರ್ಣ ಸಹಕಾರ ನೀಡುವುದಾಗಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ. ಮೆಲ್ವಿನ್ ಮೆಂಡೊನ್ಸಾ ಪತ್ರಿಕೆಗೆ ತಿಳಿಸಿದ್ದಾರೆ.







