ಅವಿಭಜಿತ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ: ಕೆ.ಎಚ್.ಮುನಿಯಪ್ಪ
ಚಿಂತಾಮಣಿ,ಫೆ.4: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಮತ್ತು ಅವಿಭಜಿತ ಜಿಲ್ಲೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಮುಂದಾಗಿರುವುದಾಗಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು. ಚಿಂತಾಮಣಿಯ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡಿರುವ ಹಿನ್ನ್ನೆಲೆಯಲ್ಲಿ ನಗರದ ಮಾಳಪ್ಪಲ್ಲಿಯ ನಿವಾಸಕ್ಕೆ ತನ್ನ ಅಪಾರ ಬೆಂಬಲಿಗರೊಡನೆ ಆಗಮಿಸಿದ ಅವರು, ನೆರೆದಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಂಭದಲ್ಲಿ ಮಾಜಿ ಸಚಿವ ಎ.ಚೌಡರೆಡ್ಡಿ ಯವರು ಈ ಕ್ಷೇತ್ರದಲ್ಲಿ ಸುಮಾರು 18 ಸಾವಿರ ಅಧಿಕ ಮತಗಳನ್ನು ದೊರಕಿಸಿಕೊಟ್ಟು ನನ್ನನ್ನು ಸಂಸದರನ್ನಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜಕಾರಣದಲ್ಲಿ ಶಾಶ್ವತ ಮಿತ್ರರು ಇಲ್ಲ-ಶತ್ರುಗಳು ಇಲ್ಲ. ಕಾರಣಾಂತರಗಳಿಂದ ಬೇರೆಯಾಗಿದ್ದು, ಇಂದು ಪಕ್ಷದ ಹಿತದೃಷ್ಟಿಯಿಂದ ನಾವು ಒಂದಾಗಬೇಕೆಂಬ ಅನಿವಾರ್ಯತೆಯನ್ನು ಅರಿತು ಪಕ್ಷವನ್ನು ಸದೃಢಗೊಳಿಸಲು ಮುಂದಾಗಿದ್ದೇವೆ ಎಂದರು. ನನ್ನ ಬೆಂಬಲಿಗರು ಮತ್ತು ವಾಣಿ ಕೃಷ್ಣಾರೆಡ್ಡಿ ಬೆಂಬಲಿಗರನ್ನು ಜೊತೆಗೂಡಿಸಿಕೊಂಡು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಒಗ್ಗಟ್ಟಿನಿಂದ ಕೊಂಡೊಯ್ಯುವಂತೆ ಮಾಜಿ ಶಾಸಕರಿಗೆ ಕಿವಿಮಾತು ಹೇಳಿದರು. ಪಂ, ತಾಪಂ ಚುನಾವಣೆಗಳಲ್ಲಿ ಪಕ್ಷದ ಟಿಕೆಟ್ ಕೈತಪ್ಪಿರುವುದರಿಂದ ಆಕಾಂಕ್ಷಿಗಳು ಬೇಸರಗೊಳ್ಳದಿರುವಂತೆ ಕೋರಿದ ಅವರು, ಮುಂದಿನ ದಿನಗಳಲ್ಲಿ ಸರಕಾರದ ನಾಮ ನಿರ್ದೇಶನ ಸ್ಥಾನಗಳನ್ನು ಒದಗಿಸಿ ಕೊಡುವುದಾಗಿ ಹಾಗೂ ವಾಣಿ ಕೃಷ್ಣಾರೆಡ್ಡಿಯವರಿಗೆ ಸೂಕ್ತ ಸ್ಥಾನ ನೀಡಲಾಗುವುದೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಅವಿಭಜಿತ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಿ ಎಲ್ಲ ಹನ್ನೊಂದು ಸ್ಥಾನಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್, ಕಾಂಗ್ರೆಸ್ ಪಕ್ಷದಲ್ಲಿ ನನ್ನ ಸ್ನೇಹಿತರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಬಿಟ್ಟು ಅನ್ಯ ಪಕ್ಷಗಳಿಗೆ ಹೋಗಲು ಮನಸ್ಸಿಲ್ಲದೆ ಪುನಃ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ತಿಳಿಸಿದರು. ನ್ನೂ ದಡಸೇರದ ಒಮ್ಮತ : ಈ ಸಂದರ್ಭದಲ್ಲಿ ಮಾಜಿ ಸಚಿವ ದಿವಂಗತ ಕೆ.ಎಂ.ಕೃಷ್ಣಾರೆಡ್ಡಿ ಪುತ್ರಿ ವಾಣಿ ಕೃಷ್ಣಾರೆಡ್ಡಿ ಸೇರಿದಂತೆ ಅವರ ಬೆಂಬಲಿಗರು ಗೈರು ಹಾಜರಾಗಿರುವುದನ್ನು ನೋಡಿದಾಗ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಭಾಸವಾಗುತ್ತಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ವಿ.ಸುಬ್ಬಾರೆಡ್ಡಿ, ಜಿಪಂ ಮಾಜಿ ಸದಸ್ಯ ಎಸ್.ಎನ್.ಚಿನ್ನಪ್ಪ, ತಾಪಂ ಅಧ್ಯಕ್ಷ ಸುಬ್ರಮಣ್ಯಂ, ಮಾಜಿ ಅಧ್ಯಕ್ಷರಾದ ಸ್ಕೂಲ್ ಸುಬ್ಬಾರೆಡ್ಡಿ, ರೆಡ್ಡೆಪ್ಪ, ಮಾಜಿ ಸದಸ್ಯರಾದ ಸುಲ್ತಾನ್ ಶರೀಫ್, ಹಾದಿಗೆರೆ ಚೌಡರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಶ್ವತ್ಥರೆಡ್ಡಿ, ಮುಖಂಡರಾದ ಮುನಿಶಾಮಿರೆಡ್ಡಿ, ಆನೂರು ಸುಬ್ಬಣ್ಣ, ಸಂತೇಕಲ್ಲಹಳ್ಳಿ ಗೋವಿಂದಪ್ಪ, ಬುಕ್ಕನಹಳ್ಳಿ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.





