ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಗತ್ಯ:ನ್ಯಾ.ಬೆಳ್ಳುಂಕೆ

ಚಿಕ್ಕಬಳ್ಳಾಪುರ, ಫೆ.4: ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವುದು ಕಾನೂನಿನ ಕೆಲಸವೆಂದು ಭಾವಿಸದೆ, ಇಡೀ ಸಮಾಜವೇ ಪಾಲ್ಗೊಂಡಾಗ ಮಾತ್ರ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ವಿದ್ಯಾನಿಕೇತನ ಪಿಯು ಕಾಲೇಜಿನಿಂದ ಹಮ್ಮಿಕೊಂಡಿದ್ದ ಮಹಿಳಾ ಮತ್ತು ಮಕ್ಕಳ ಜಾಗೃತಿ ಹಾಗೂ ಕೌಟುಂಬಿಕ ದೌರ್ಜನ್ಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಸುಶಿಕ್ಷಿತರಾದಲ್ಲಿ ಸಮಸ್ಯೆ ದೂರ’
ವಿದ್ಯಾರ್ಥಿ ಜೀವನದಲ್ಲಿಯೇ ಮನಸನ್ನು ಚಂಚಲಗೊಳಿಸದೇ ಸುಶಿಕ್ಷಿತರಾದಾಗ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹಿಡಿತ ಸಾಧಿಸಲು ಸಾಧ್ಯ. ಮಹಿಳೆಯರ ರಕ್ಷಣೆಗಾಗಿ ವಿವಿಧ ರೀತಿಯ ಕಾನೂನು ಜಾರಿಯಲ್ಲಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಂಡು ಎಲ್ಲ ಕ್ಷೇತ್ರಗಳಿಲ್ಲಿಯೂ ಸಬಲತೆ ಸಾಧಿಸಬೇಕೆಂದು ತಿಳಿಸಿದರು.
‘ಪ್ರಕರಣಗಳ ಮಾಹಿತಿ ನೀಡಿ’
ಮಹಿಳೆಯ ಬಗ್ಗೆ ಬೇರೂರಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಿ, ಇದರ ವಿರುದ್ಧ ಧ್ವನಿ ಎತ್ತುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ, ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಹಾಗೂ ಕಿರುಕುಳ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವ ಮೂಲಕ ಆಗಬಹುದಾದ ಅನಾಹುತಗಳನ್ನು ತಡೆಯಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ತಿಳಿಸಿದರು.
ನಮ್ಮ ದೇಶದಲ್ಲಿ ಮಾತ್ರವಲ್ಲದೆ, ಮುಂದುವರಿದ ರಾಷ್ಟ್ರಗಳಲ್ಲೂ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣಗಳು ಕಂಡು ಬರುತ್ತಿವೆ. ದೇಶದಲ್ಲಿ 2006 ರ ವರದಿಯನ್ವಯ 14 ರಿಂದ 49 ವಯಸ್ಸಿನೊಳಗಿನ ಮಹಿಳೆಯ ಮೇಲೆ ಶೇ.8.5 ರಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಾನೂನಿನ ಅರಿವಿನಿಂದ ಮಾತ್ರ ಎಲ್ಲ ರೀತಿಯ ಅಪರಾಧಿಕ ಕೃತ್ಯಗಳನ್ನು ತಡೆಯಲು ಸಾಧ್ಯವಿದ್ದು, ಪ್ರತಿಯೊಬ್ಬರೂ ತಪ್ಪದೇ ಕಾನೂನಿನ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬೇಕೆಂದರು.ಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್. ಶೋಭಾ, ವಿದ್ಯಾ ನಿಕೇತನ ಪಿಯು ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ ರೆಡ್ಡಿ, ಶಿಶು ಯೋಜನಾಧಿಕಾರಿ ಎ. ರಾಮರಾಜ್ ಅರಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ಬಿ.ನೌತಾಜ್ ಮತ್ತಿತರರು ಉಪಸ್ಥಿತರಿದ್ದರು.
ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಧಾರ್ಮಿಕ ಕಟ್ಟುಪಾಡುಗಳು, ಪುರುಷ ಪ್ರಧಾನ ಸಮಾಜ, ಆಚಾರ-ವಿಚಾರ, ನಂಬಿಕೆ ಹಾಗೂ ಸಂಸ್ಕೃತಿಯಲ್ಲಿಯೂ ಮಹಿಳೆಯ ಬಗ್ಗೆ ತಪ್ಪುಸಿದ್ಧಾಂತಗಳನ್ನು ಬಿಂಬಿಸಲಾಗಿದೆ. ಇದರಿಂದಾಗಿ ಮಹಿಳೆಯ ಮೇಲೆ ನಿರಂತರ ದಬ್ಬಾಳಿಕೆ ಹಾಗೂ ತಪ್ಪು ಅಭಿಪ್ರಾಯಗಳು ಬೆಳೆಯುತ್ತಿದೆ. ಇಂತಹ ಧೋರಣೆಗಳ ವಿರುದ್ಧ ಪ್ರತಿಯೊಬ್ಬರೂ ಹೋರಾಡುವ ಅಗತ್ಯವಿದೆ.
ಎ.ಎಸ್. ಬೆಳ್ಳುಂಕೆ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ,







