ನಾಝಿಗಳಿಂದ ಸಾವಿರಾರು ಯಹೂದಿಗಳನ್ನು ರಕ್ಷಿಸಿದ್ದ ಮುಸ್ಲಿಮ್ ರಾಜತಾಂತ್ರಿಕ
ಇಂಥ ಹೀರೊಗಳನ್ನು ಸ್ಮರಿಸುವ ಅಭಿಯಾನ ‘ಐ ಆ್ಯಮ್ ಯುವರ್ ಪ್ರೊಟೆಕ್ಟರ್’
ಲಂಡನ್, ಫೆ. 4: ಜರ್ಮನಿಯ ಜನಾಂಗೀಯವಾದಿ ನಾಝಿ ಆಡಳಿತದ ಅವಧಿಯಲ್ಲಿ, ಮುಸ್ಲಿಮ್ ರಾಜತಾಂತ್ರಿಕರೊಬ್ಬರು ಸಾವಿರಾರು ಯಹೂದಿಗಳನ್ನು ರಕ್ಷಿಸಿದ್ದ ಅಂಶವೊಂದು ಬೆಳಕಿಗೆ ಬಂದಿದೆ.
ಆಕ್ರಮಿತ ಫ್ರಾನ್ಸ್‌ನಲ್ಲಿ ನಾಝಿಗಳು ಯಹೂದಿ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಲು ಆರಂಭಿಸಿದಾಗ, ಪ್ಯಾರಿಸ್‌ನಲ್ಲಿನ ಇರಾನ್ ಕಾನ್ಸುಲೇಟ್ ಕಚೇರಿಯ ಮುಖ್ಯಸ್ಥ ಅಬ್ದುಲ್ ಹುಸೈನ್ ಸರ್ದಾರಿ ತನ್ನದೇ ರೀತಿಯಲ್ಲಿ ಯಹೂದಿಗಳ ರಕ್ಷಣೆಗೆ ಧಾವಿಸಿದರು. ಅವರು ನಾಝಿಗಳ ‘ಜನಾಂಗೀಯ ಶುದ್ಧತೆ’ ಕಾನೂನುಗಳನ್ನೇ ಬಳಸಿಕೊಂಡು, ಇರಾನ್‌ನ ಯಹೂದಿಯರು ವಾಸ್ತವವಾಗಿ ಆರ್ಯನ್ನರು, ಹಾಗಾಗಿ ರೀಕ್‌ನ ಜನಾಂಗೀಯ ಕಾನೂನುಗಳಿಗೆ ಒಳಪಡುವುದಿಲ್ಲ ಎಂಬುದನ್ನು ನಾಝಿ ಆಡಳಿತಕ್ಕೆ ಮನವರಿಕೆ ಮಾಡಿಕೊಟ್ಟರು.
ನಾಝಿ ಆಕ್ರಮಿತ ಪ್ರದೇಶಗಳಲ್ಲಿದ್ದ ಯಹೂದಿಗಳಿಗೆ ಅವರು ಇರಾನ್ ಪಾಸ್‌ಪೋರ್ಟ್‌ಗಳನ್ನು ನೀಡಿದರು. ಇದನ್ನು ಅವರು ಎಷ್ಟು ಅವಸರವಸರವಾಗಿ ಮಾಡಿದರೆಂದರೆ, ಹಿರಿಯ ಅಧಿಕಾರಿಗಳ ಅನುಮೋದನೆಗೂ ಕಾಯಲಿಲ್ಲ. ಈ ಮೂಲಕ, ಸರ್ದಾರಿ 2000 ಯಹೂದಿಗಳು ನಾಝಿ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದರು.
ಯಹೂದಿ ಹತ್ಯಾಕಾಂಡ ಅವಧಿಯಲ್ಲಿ, ತಮ್ಮ ಜೀವವನ್ನೇ ಪಣವಾಗಿಟ್ಟುಕೊಂಡು ಯಹೂದಿಯರ ರಕ್ಷಣೆಗೆ ಧಾವಿಸಿದ ಅದೆಷ್ಟೋ ಮುಸ್ಲಿಮರಿದ್ದಾರೆ. ‘ಐ ಆ್ಯಮ್ ಯುವರ್ ಪ್ರೊಟೆಕ್ಟರ್’ ಎಂಬ ಅಭಿಯಾನದ ಮೂಲಕ, ಇಂಥ ಮುಸ್ಲಿಮರನ್ನು ಗುರುತಿಸಿ ಅವರ ಪಟ್ಟಿಯೊಂದನ್ನು ತಯಾರಿಸಲಾಗುತ್ತಿದೆ. ಈ ಪಟ್ಟಿಯಲ್ಲಿ ಸರ್ದಾರಿ ಕೂಡ ಇದ್ದಾರೆ.
ಜನ ಮಾನಸದಿಂದ ಮರೆತು ಹೋದ, ಇತಿಹಾಸದ ಅತ್ಯಂತ ಭೀಕರ ಜನಾಂಗೀಯ ಹತ್ಯೆಯ ಅವಧಿಯಲ್ಲಿ ಯಹೂದಿಗಳನ್ನು ರಕ್ಷಿಸಲು ತಮ್ಮ ಜೀವಗಳನ್ನೇ ಪಣವಾಗಿಟ್ಟು ಪ್ರಯತ್ನಿಸಿದ ಧೀರ ಮುಸ್ಲಿಮರನ್ನು ಈ ಅಭಿಯಾನದ ಮೂಲಕ ಮತ್ತೆ ಮುನ್ನೆಲೆಗೆ ತರಲು ಪ್ರಯತ್ನಿಸಲಾಗುತ್ತಿದೆ.
ವೀರ ಮಹಿಳೆ ನೂರ್ ಇನಾಯತ್
ಇನ್ನೊಂದು ಕತೆ ಬ್ರಿಟಿಷ್ ಮುಸ್ಲಿಮ್ ಯುದ್ಧ ನಾಯಕಿ ನೂರ್ ಇನಾಯತ್ ಖಾನ್‌ರದ್ದು. ಅವರು ಎರಡನೆ ಮಹಾಯುದ್ಧದ ಅವಧಿಯಲ್ಲಿ ವಯರ್‌ಲೆಸ್ ಆಪರೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರನ್ನು ನಾಝಿ ಆಕ್ರಮಿತ ಫ್ರಾನ್ಸ್‌ನಲ್ಲಿ ಮಿತ್ರ ಪಡೆಗಳ ಪರವಾಗಿ ಗೂಢಚಾರಿಕೆ ನಡೆಸಲು ನಿಯೋಜಿಸಲಾಗಿತ್ತು. ತನ್ನ ಬಂಧನದವರೆಗೂ ಅವರು ನಾಝಿ ವಿರುದ್ಧದ ಚಳವಳಿಗೆ ಬೆಂಬಲ ನೀಡಿದರು. ಅಂತಿಮವಾಗಿ ಅವರನ್ನು ನಾಝಿಗಳು ಯಾತನಾ ಶಿಬಿರದಲ್ಲಿ ಹತ್ಯೆ ಮಾಡಿದರು.







