ಫೆ.25 ರೈಲ್ವೆ, 29 ಕೇಂದ್ರ ಬಜೆಟ್

ಫೆ.23ರಿಂದ ಸಂಸತ್‌ನ ಬಜೆಟ್ ಅಧಿವೇಶನ
ಫೆ.26 ಆರ್ಥಿಕ ಸಮೀಕ್ಷೆ
ಹೊಸದಿಲ್ಲಿ, ಫೆ.4: ಸಂಸತ್ತಿನ ಬಜೆಟ್ ಅಧಿವೇಶನ ಫೆ.23ರಂದು ಆರಂಭಗೊಳ್ಳಲಿದೆ. ಫೆ.29ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಕೇಂದ್ರ ಆಯವ್ಯಯ ಪತ್ರವನ್ನು ಮಂಡಿಸಲಿದ್ದಾರೆ.
ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದೆ. ನಡುವೆ ಒಂದು ತಿಂಗಳಿಗೂ ಹೆಚ್ಚು ಕಾಲ ಬಿಡುವು ಇರುತ್ತದೆ. ಮೇ 13ರಂದು ಅಧಿವೇಶನ ಕೊನೆಗೊಳ್ಳಲಿದೆ. ಅಂದರೆ, ನರೇಂದ್ರ ಮೋದಿ ಸಂಪುಟದ ಬಹು ನಿರೀಕ್ಷಿತ ಪುನಾರಚನೆ ಮೇ ಮಧ್ಯದವರೆಗೆ ನಡೆಯುವ ಸಾಧ್ಯತೆಯಿಲ್ಲ.
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್‌ರ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು, ಎಪ್ರಿಲ್ ಮಧ್ಯಭಾಗದಲ್ಲಿ 5 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲಿರುವ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಮಾಲೋಚಿಸಿದ ಬಳಿಕ ಅಧಿವೇಶನದ ವೇಳಾಪಟ್ಟಿಯನ್ನು ಗುರುವಾರ ನಿಗದಿಗೊಳಿಸಿದೆ.
ಬಜೆಟ್ ಅಧಿವೇಶನದ ಮೊದಲ ಹಂತ ಮಾ.16ರ ವರೆಗೆ ನಡೆಯಲಿದ್ದು, ಬಳಿಕ ಎ. 24ರ ವರೆಗೆ ರಜೆಯಿರುತ್ತದೆ. ಎರಡನೆ ಹಂತದ ಅಧಿವೇಶನ ಎ.25ರಂದು ಆರಂಭವಾಗಲಿದೆ. ಇದರಿಂದಾಗಿ, ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಹಾಗೂ ಪುದುಚೇರಿಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ 40 ದಿನಗಳ ಸಮಯಾವಕಾಶ ಸಿಗಲಿದೆ.
ಚುನಾವಣೆಗಳಿಗೆ ಅನುಕೂಲವಾಗುವಂತೆ ರಜೆಯಿಲ್ಲದೆ ಕೆಲವು ದಿನಗಳ ಕಾಲ ಅಧಿವೇಶನ ನಡೆಸುವ ಪ್ರಸ್ತಾಪವಿತ್ತು. ಆದರೆ, ಅದನ್ನು ವಿಪಕ್ಷಗಳು ವಿರೋಧಿಸಿದ್ದವು. ಇಂದಿನ ಸಭೆಯು ವಿಪಕ್ಷಗಳೊಂದಿಗೆ ಶಾಂತಿ ಏರ್ಪಡಿಸಿಕೊಳ್ಳುವ ಪ್ರಯತ್ನವೆಂದು ಅಭಿಪ್ರಾಯಿಸಲಾಗಿದೆ.
ಫೆ.23ರಂದು ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾಷಣ ಮಾಡುವುದರೊಂದಿಗೆ ಸಂಸತ್‌ನ ಬಜೆಟ್ ಅಧಿವೇಶನ ಆರಂಭವಾಗಲಿದೆ. ರೈಲ್ವೆ ಬಜೆಟನ್ನು ಫೆ.25ರಂದು ಮಂಡಿಸಲಾಗುವುದು. ಮರುದಿನ (ಫೆ.26) ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ.
ಲೋಕಸಭೆಯ ಈ ಬಾರಿಯ ಅಧಿವೇಶನದಲ್ಲಿ ಮುಖ್ಯವಾಗಿ ಜಿಎಸ್‌ಟಿ ಮಸೂದೆ ಸೇರಿದಂತೆ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ, ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಸೇರಿದಂತೆ ಹಲವು ವಿಷಯಗಳು ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧಗೊಂಡಿವೆ.







