ರೈಲ್ವೆ ಬಜೆಟಿನಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು: ಮಲ್ಲಿಕಾರ್ಜುನ ಖರ್ಗೆ ಮನವಿ
ಬೆಂಗಳೂರು, ಫೆ. 4: ಈ ತಿಂಗಳು ಮಂಡನೆಯಾಗಲಿರುವ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಇನ್‌ವೆಸ್ಟ್ ಕರ್ನಾಟಕ-2016 ಸಮಾವೇಶದ ಸಮಾರೋಪದಲ್ಲಿಂದು ಮಾತನಾಡಿದ ಅವರು, ಕೇಂದ್ರ ರೈಲ್ವೆ ಸಚಿವಾಲಯ ರಾಜ್ಯಗಳೊಂದಿಗೆ ಮಾಡಿಕೊಳ್ಳುತ್ತಿರುವ ಸಹಭಾಗಿತ್ವ ಒಪ್ಪಂದಗಳಿಂದ ರಾಜ್ಯದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಅಲ್ಲದೇ ಲಾಭದ ದೃಷ್ಟಿಕೋನ ಇರುವ ಈ ಯೋಜನೆಗಳಿಂದ ಅಭಿವೃದ್ಧಿಹೊಂದಿದ ಪ್ರದೇಶಗಳೇ ಹೆಚ್ಚು ಪ್ರಯೋಜನ ಪಡೆಯುವಂತಾಗಿದೆ. ಇದರ ಬದಲಿಗೆ ಹಿಂದುಳಿದ ಪ್ರದೇಶಗಳಿಗೆ ನೆರವಾಗುವ ಮತ್ತು ಜನಸಾಮಾನ್ಯರಿಗೆ ಪ್ರಯೋಜನವಾಗುವ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಅವರು ರೈಲ್ವೆ ಸಚಿವರನ್ನು ವಿನಂತಿಸಿದರು. ಮುಂಬೈ ಮತ್ತು ಅಹ್ಮದಾಬಾದ್ ನಡುವಿನ 500 ಕಿ.ಮೀ ದೂರದ ಯೋಜನೆಗೆ ಒಂದು ಲಕ್ಷ ಕೋಟಿ ರೂ. ವೆಚ್ಚ ಮಾಡುವುದು ರೈಲ್ವೆ ಸಚಿವಾಲಯಕ್ಕೆ ಹೊರೆಯಾಗಲಿದೆ. ಇದರ ಬದಲಿಗೆ ಕೈಗಾರಿಕಾ ಕಾರಿಡಾರ್ ನಡುವೆ ರೈಲ್ವೆ ಜಾಲ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕೇಂದ್ರ ಎಂದು ಹೆಸರಾಗಿರುವ ಕರ್ನಾಟಕ ದೇಶದ ಅಭಿವೃದ್ಧಿಹೊಂದಿದ ಅಗ್ರ 5 ರಾಜ್ಯಗಳ ಪೈಕಿ ಒಂದಾಗಿದೆ. ಅಲ್ಲದೆ ಅತಿ ಹೆಚ್ಚು ಬಂಡವಾಳ ಹೂಡಿಕೆ ಆಕರ್ಷಿಸುತ್ತಿರುವ 3 ಅಗ್ರ ರಾಜ್ಯಗಳ ಪೈಕಿ ಒಂದಾಗಿದೆ. ಆನ್‌ಲೈನ್ ರಿಟೇಲ್ ವಲಯದ ಉದ್ದಿಮೆಯಲ್ಲಿ ದೇಶದಲ್ಲೇ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಮುಂದಿನ ಎರಡು ದಶಕಗಳ ಕಾಲ ಕರ್ನಾಟಕ ಹೆಚ್ಚಿನ ಅಭಿವೃದ್ಧಿ ದರ ದಾಖಲಿಸುವ ನಿರೀಕ್ಷೆ ಇದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.





