ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ: ಐವರ ಬಂಧನ

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಪರಮೇಶ್ವರ್
ಬೆಂಗಳೂರು, ಫೆ.4: ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ ಎರಡು ಕಾರುಗಳಿಗೆ ಬೆಂಕಿ ಹಚ್ಚಿ ಹಾನಿಗೀಡು ಮಾಡಿದ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳನ್ನು ಲೋಕೇಶ್ (40), ವೆಂಕಟೇಶ್ (37) ಸಲೀಂ ಪಾಷಾ (37), ಭಾನುಪ್ರಕಾಶ್ (25) ಹಾಗೂ ರಹ್ಮತುಲ್ಲಾ (42) ಎಂದು ಗುರುತಿಸಲಾಗಿದೆ ಎಂದರು.
ನಗರದ ಹೆಸರಘಟ್ಟ ರಸ್ತೆಯ ಸೋಲದೇವನವಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಫ್ರಿಕಾ ಮೂಲದ ತಾಂಝಾನಿಯ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಿವರಣೆ ನೀಡಲಾಗುವುದೆಂದು ಪರಮೇಶ್ವರ್ ತಿಳಿಸಿದರು.
ಜ.31ರಂದು ರವಿವಾರ ಸಂಜೆ 7:30ರ ಸುಮಾರಿಗೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ತರಬನಹಳ್ಳಿಯ ಮಲ್ಲಿಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಹಮ್ಮದ್ ಅಹ್ಮದ್ ಇಸ್ಮಾಯೀಲ್ ಎಂಬಾತ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಕೆ.ಸನಾವುಲ್ಲಾ-ಶಬಾನಾ ತಾಜ್ ದಂಪತಿಗೆ ಢಿಕ್ಕಿ ಹೊಡೆದಿದ್ದ. ಇದರಿಂದ ಶಬಾನಾತಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆ ಹಿನ್ನೆಲೆಯಲ್ಲಿ ಉದ್ರಿಕ್ತ ಸ್ಥಳೀಯರು ಅಪಘಾತಕ್ಕೆ ಕಾರಣವಾದ ಕಾರಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ಆ ಬಳಿಕ ಘಟನಾ ಸ್ಥಳದಿಂದ ಒಂದೂವರೆ ಕಿ.ಮೀ. ದೂರದ ಸಪ್ತಗಿರಿ ಕಾಲೇಜ್ ಬಳಿ ವ್ಯಾಗನಾರ್ ಕಾರಿನಲ್ಲಿ ವಿದೇಶಿ ವಿದ್ಯಾರ್ಥಿನಿ ಸೇರಿ ನಾಲ್ವರು ಬರುತ್ತಿದ್ದರು. ಆ ಕಾರನ್ನೂ ತಡೆದ ಉದ್ರಿಕ್ತರ ಗುಂಪು ಚಾಲಕನ ಸೀಟಿನಲ್ಲಿದ್ದ ಜಮಾಲ್ ಇಬ್ರಾಹೀಂ ಎಂಬಾತನ ಮೇಲೆ ಹಲ್ಲೆ ನಡೆಸಿದೆ. ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಾಗೂ ಅವರೊಂದಿಗಿದ್ದ ಇತರ ವಿದ್ಯಾರ್ಥಿಗಳ ಮೇಲೆಯೂ ಮನಸೋ ಇಚ್ಛೆ ಹಲ್ಲೆ ನಡೆಸಿ ಕಾರಿಗೆ ಬೆಂಕಿಹಚ್ಚಿ ಹಾನಿ ಮಾಡಲಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಈ ವೇಳೆಯಲ್ಲಿ ಲೀನಾ ಎಂಬ ವಿದ್ಯಾರ್ಥಿನಿ ತಪ್ಪಿಸಿಕೊಳ್ಳಲು ಯತ್ನಿಸಿ ಬಿಎಂಟಿಸಿ ಬಸ್ ಏರಿದ್ದಾಳೆ. ಆದರೆ ಪ್ರಯಾಣಿಕರು ಅದಕ್ಕೆ ಅವಕಾಶ ನೀಡದೆ ಆಕೆಯನ್ನು ಕೆಳಗಿಳಿಸಿದ್ದಾರೆ. ಆಗ ಅಲ್ಲಿಗೆ ಬಂದ ಇರಾನಿ ವಿದ್ಯಾರ್ಥಿ ಆಕೆಯನ್ನು ರಕ್ಷಣೆ ಮಾಡಿದ್ದಾನೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಅವರು ತಿಳಿಸಿದರು.
ದೂರು ವಿಳಂಬ: ವಿದ್ಯಾರ್ಥಿನಿಯ ಮೇಲೆ ಜ.31ರಂದು ಹಲ್ಲೆ ನಡೆದಿದ್ದು, ಆಕೆ ಫೆ.3ರಂದು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಘಟನೆಯ ಬಗ್ಗೆ ಕೂಲಂಕಷ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಪೊಲೀಸರು ಅಪಘಾತದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಜನಾಂಗೀಯ ದಾಳಿಯಲ್ಲ
ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 12 ಸಾವಿರಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡಲಾಗಿದೆ. ವಿದೇಶಿ ವಿದ್ಯಾರ್ಥಿಗಳೂ ಈ ನೆಲದ ಕಾನೂನನ್ನು ಗೌರವಿಸಿ ಸಹನೆ, ಶಾಂತಿಯಿಂದ ಇರಬೇಕು. ಜ.31ರಂದು ಸಂಜೆ ನಡೆದ ಘಟನೆ ಜನಾಂಗೀಯ ದಾಳಿಯಲ್ಲ.
- ಡಾ.ಜಿ.ಪರಮೇಶ್ವರ್, ಗೃಹ ಸಚಿವ
ಸಿಸಿಬಿ ತನಿಖೆಗೆ ವರ್ಗಾವಣೆ
ವಿದೇಶಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಸರಕಾರ ಗಂಭೀರ ವಾಗಿ ಪರಿಗಣಿಸಿದ್ದು, ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
-ಕೆ.ಎಸ್.ಆರ್.ಚರಣ್ ರೆಡ್ಡಿ, ಪಶ್ಚಿಮ ವಿಭಾಗದ ಡಿಸಿಪಿ







