ಪೊಲೀಸರಿಂದ ದೌರ್ಜನ್ಯ ಪ್ರಕರಣ: ಸಂತ್ರಸ್ತರಿಂದ ರಾಜ್ಯ ಗೃಹ ಸಚಿವ, ಮಾನವ ಹಕ್ಕು ಆಯೋಗಕ್ಕೆ ದೂರು
ಕಲ್ಲಡ್ಕ, ಫೆ. 4: ಮಂಗಳವಾರ ನಡೆದ ಗುಂಪು ಘರ್ಷಣೆಯ ಬಳಿಕ ಪೊಲೀಸರು ತನ್ನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಲ್ಲಡ್ಕ ನಿವಾಸಿ ಖಾದ್ರಿ ಬ್ಯಾರಿ ಎಂಬವರು ರಾಜ್ಯ ಗೃಹ ಸಚಿವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಗುರುವಾರ ದೂರು ನೀಡಿದ್ದಾರೆ.
ತನ್ನ ಮಗ ಅಶ್ರಫ್ ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಆರೋಪಿಸಿ, ಆತನಿಗೆ ಸೇರಿರುವ ಕಲ್ಲಡ್ಕ ಟಿಕ್ಕಾ ಪಾಯಿಂಟ್ ಹೊಟೇಲ್ ಮುಚ್ಚಿಸಿದ್ದಾರೆ. ಅಶ್ರಫ್‌ನನ್ನು ಬಂಧಿಸುವ ನೆಪದಲ್ಲಿ ರಾತ್ರೋ ರಾತ್ರಿ ಮನೆಗೆ ನುಗ್ಗುತ್ತಿರುವ ಬಂಟ್ವಾಳ ನಗರ ಠಾಣೆ ಎಸ್ಸೈ ನಂದ ಕುಮಾರ್ ಮತ್ತವರ ಸಿಬ್ಬಂದಿ ಕೆಟ್ಟ ಪದಗಳಿಂದ ನಿಂದಿಸಿ ತನ್ನನ್ನೂ, ತನ್ನ ಇತರ ಮಕ್ಕಳು ಹಾಗೂ ಸೊಸೆಯಂದಿರನ್ನು ಬೆದರಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಪೊಲೀಸರ ವರ್ತನೆಯಿಂದ ಮನೆ ಮಂದಿ ಭಯಭೀತರಾಗಿದ್ದಾರೆ ಎಂದು ಖಾದ್ರಿ ಬ್ಯಾರಿ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ರಾತ್ರಿ ಸಮಯದಲ್ಲಿ ಮನೆ ಬಾಗಿಲು ಬಡಿಯುವುದು, ಮಹಿಳಾ ಸಿಬ್ಬಂದಿ ಇಲ್ಲದೆ ಮನೆಯೊಳಗೆ ನುಗ್ಗಿ ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿರುವುದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಿರುವ ಅವರು, ಪೊಲೀಸರಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.





