ಕೋಕ್ ಹಾರುಬೂದಿ ಸಮಸ್ಯೆ: ಜೋಕಟ್ಟೆ ಗ್ರಾಮಕ್ಕೆ ಡಿಸಿ ಭೇಟಿ

ಮಂಗಳೂರು: ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕದಿಂದ ಹೊರಬಿಡ ಲಾಗುತ್ತಿರುವ ಹಾರುಬೂದಿಯಿಂದ ಸಮಸ್ಯೆಗೊಳಗಾಗಿರುವ ಜೋಕಟ್ಟೆ ಗ್ರಾಮದ ನಿರ್ಮುಂಜೆ, ಹರಿಕೊಳ, ಪಂಚಾಯತ್ ಗುಡ್ಡೆ ಪ್ರದೇಶಗಳಿಗೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಸ್ಥಳೀಯರು ಕೋಕ್ ಸಲ್ಫರ್ ಘಟಕದಿಂದ ಹೊರಬರುತ್ತಿರುವ ಹಾರುಬೂದಿಯಿಂದ ಜೋಕಟ್ಟೆ ಪರಿಸರ ದಲ್ಲಿ ನಿರ್ಮಾಣವಾಗಿರುವ ಮಾಲಿನ್ಯದ ಬಗ್ಗೆ ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೈಗಾರಿಕೆಗಳಿಂದ ಮಾಲಿನ್ಯ ಪ್ರಮಾಣ ಹೊರಬರುವುದು ಸಾಮಾನ್ಯ ವಾದರೂ ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದಿಂದ ಹೊರಬರು ತ್ತಿರುವ ಪ್ರಮಾಣ ಜಾಸ್ತಿ ಇದೆ ಎಂಬುದು ವೀಕ್ಷಣೆಯಿಂದ ತಿಳಿದು ಬಂದಿದೆ. ಎಂಆರ್‌ಪಿಎಲ್ ಅಧಿಕಾರಿ ಗಳು ಮಾಲಿನ್ಯ ನಿಯಂತ್ರಿಸಲು ಕ್ರಮ ಕೈಗೊಂಡಿರುವುದು ಕಾಣಿಸುತ್ತಿಲ್ಲ. ಕಾನೂನು ಪ್ರಕಾರ ಅವರಿಗೆ ಕೊಟ್ಟ ಭೂಮಿಯಲ್ಲಿ ಹಸಿರೀಕರಣವನ್ನು ಮಾಡ ಲಾಗಿಲ್ಲ. ಈ ಬಗ್ಗೆ ರಾಜ್ಯ ಸರಾರಕ್ಕೆ ವರದಿ ನೀಡಲಾಗುವುದು ಎಂದರು.
ಪರಿಸರ ಮಾಲಿನ್ಯ ನಿಯಂತ್ರಣಾ ಧಿಕಾರಿ ರಾಜಶೇಖರ್ ಪುರಾಣಿಕ್, ಎಂಆರ್‌ಪಿಎಲ್ ನಿರ್ದೇಶಕರಾದ ಲಕ್ಷ್ಮೀ ನಾರಾಯಣ, ಸುಶೀಲ್‌ಚಂದ್ರ ಮತ್ತು ಎಸ್‌ಇಝಡ್ ಅಧಿಕಾರಿಗಳೊಂದಿಗೆ ಹಲವು ಮನೆಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮಸ್ಯೆ ಇತ್ಯರ್ಥಕ್ಕಾಗಿ ನಡೆಸಿದ ಹೋರಾಟಗಳನ್ನು ಜಿಲ್ಲಾಡಳಿತ ಸುಳ್ಳು ಹೋರಾಟ ಎಂದು ಪರಿಗಣಿಸಿತ್ತು. ನಂತರದಲ್ಲಿ ಹೋರಾಟವನ್ನು ಪೊಲೀಸ್ ಬಲಪ್ರಯೋಗದಲ್ಲಿ ಹತ್ತಿಕ್ಕಲು ಯತ್ನಿಸಲಾಯಿತು. ಇದೀಗ ಸಮಸ್ಯೆಯ ಅರಿವಾಗಿ ಜಿಲ್ಲಾಧಿಕಾರಿ ಜೋಕಟ್ಟೆ ಗ್ರಾಮಕ್ಕೆ ಪರಿಶೀಲನೆಗಾಗಿ ಭೇಟಿ ನೀಡಿರುವುದು ನಮ್ಮ ಹೋರಾಟಕ್ಕೆ ಸಂದ ಗೆಲುವು. ಸ್ಥಾವರವನ್ನು, ಜನರನ್ನು ಸ್ಥಳಾಂತರಿಸಲು ಆಗುವುದಿಲ್ಲ ಎಂಬ ಜಿಲ್ಲಾಧಿಕಾರಿಗಳ ನಿಲುವಿಗೆ ನಮ್ಮ ವಿರೋಧವಿದೆ. ಜಿಲ್ಲಾಡಳಿತ ಕಂಪೆನಿಯನ್ನು ಸ್ಥಳಾಂತರಿಸಬೇಕೆಂಬುದೇ ನಮ್ಮ ಬೇಡಿಕೆಯಾಗಿದೆ.
-ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯಾಧ್ಯಕ್ಷರು
ಹದಗೆಟ್ಟಿರುವ ಆರೋಗ್ಯ
ಕೋಕ್ ಸಲ್ಫರ್ ಘಟಕದಿಂದ ನಿರ್ಮುಂಜೆ ಗ್ರಾಮದ ಹಲವರಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ನಿರ್ಮುಂಜೆಯ ಮುಹಮ್ಮದ್ ರಶೀದ್ ಎಂಬವರು ತಮ್ಮ ಏಳು ತಿಂಗಳ ಹೆಣ್ಣು ಮಗು ಬೆಳವಣಿಗೆಯಿಲ್ಲದೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮಗುವಿನ ಬೆಳವಣಿಗೆಗೆ ಪರಿಸರದ ಸಮಸ್ಯೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮುಹಮ್ಮದ್ ರಶೀದ್ ವಿವರಿಸಿದರು. ನಿರ್ಮುಂಜೆ ಗ್ರಾಮದಲ್ಲಿ ಮಹಿಳೆಯರು, ವೃದ್ಧರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆಯೂ ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆಯಲಾಯಿತು.
ಜಿಲ್ಲಾಧಿಕಾರಿ ವೀಕ್ಷಣೆ ವೇಳೆ ಸ್ಥಾವರ ಸ್ವಚ್ಛ!
ಕೋಕ್ ಸಲ್ಫರ್ ಘಟಕದಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಪರಿಶೀಲನೆಗೆ ಬಂದಿರುವುದರಿಂದ ಕೋಕ್ ಸಲ್ಫರ್ ಘಟಕವನ್ನು ನೀರು ಹಾಕಿ ಸ್ವಚ್ಛಗೊಳಿಸಲಾಗಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಲ್ಲಿ ಆರೋಪಿಸಿದರು.
ನಾಲ್ಕು ಮನೆಗಳ ಸ್ಥಳಾಂತರ
ಕೋಕ್ ಸಲ್ಫರ್ ಘಟಕದಿಂದ ಉಂಟಾಗಿರುವ ಪರಿಸರ ಸಮಸ್ಯೆಗೆ ನಿರ್ಮುಂಜೆ ಗ್ರಾಮದ ನಾಲ್ಕು ಮನೆಗಳು ಸ್ಥಳಾಂತರಗೊಂಡಿದೆ. ನಿರ್ಮುಂಜೆಯ ಶರೀಫ್, ಶೇಖಬ್ಬ, ಖಾದರ್, ಬಶೀರ್ ಎಂಬವರು ಮನೆ ಖಾಲಿ ಮಾಡಿ ತೆರಳಿದ್ದಾರೆ. ಮನೆ ಬಿಟ್ಟು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕಂಪೆನಿ ಸಮಸ್ಯೆ ಪರಿಹಾರಕ್ಕೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.







