ಖಜಾನೆ ಲೂಟಿ ಆರೋಪಿಗೆ ನೆಹರೂ ಪ್ರಶಸ್ತಿ ನೀಡಿದ್ದರು!

ನವದೆಹಲಿ: ಭಾರತದ ಐಎನ್‌ಎ ಖಜಾನೆಯನ್ನು ಲೂಟಿ ಮಾಡಲಾಗಿದೆ ಎಂಬ ಹಿಂದಿನ ಪ್ರತಿಪಾದನೆಯನ್ನು ಖಚಿತಪಡಿಸುವ ಪುರಾವೆಗಳು, ಇತ್ತೀಚೆಗೆ ಬಿಡುಗಡೆ ಮಾಡಲಾದ ನೇತಾಜಿ ಕುರಿತ ರಹಸ್ಯ ಕಡತಗಳಲ್ಲಿ ದೊರಕಿವೆ. 1951 ಹಾಗೂ 1955 ಅವಧಿಯಲ್ಲಿ ಟೋಕಿಯೊ ಹಾಗೂ ನವದೆಹಲಿ ನಡುವೆ ನಡೆದ ಪತ್ರ ವ್ಯವಹಾರದಿಂದ ಇದು ಬಹಿರಂಗವಾಗಿದೆ.
ಖಜಾನೆ ಲೂಟಿ ಪ್ರಕರಣ ನೆಹರೂ ಸರ್ಕಾರದ ಗಮನಕ್ಕೆ ಬಂದಿತ್ತು. ಕೇಂದ್ರ ಸರ್ಕಾರಿ ಅಧಿಕಾರಿಗಳು ಇಬ್ಬರು ನೇತಾಜಿ ಸಹಚರರ ಬಗ್ಗೆ ಅನುಮಾನ ಹೊಂದಿದ್ದರು ಎಂದು ಹೇಳಲಾಗಿದೆ.
ಇವರಲ್ಲಿ ಒಬ್ಬರನ್ನು ಪಂಚವಾರ್ಷಿಕ ಯೋಜನೆಯ ಪ್ರಚಾರ ಸಲಹೆಗಾರರಾಗಿ ನೇಂಕ ಮಾಡಲಾಗಿತ್ತು. ಸುಮಾರು 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಕೊಳ್ಳೆ ಹೊಡೆದ ವಿಷಯವನ್ನು ಮೊಟ್ಟಮೊದಲ ಬಾರಿಗೆ ಅನೂಜ್ ಧರ್ ತಮ್ಮ 2012ರ "ಇಂಡಿಯಾಸ್ ಬಿಗ್ಗೆಸ್ಟ್ ಕವರಪ್" ಎಂಬ ಕೃತಿಯಲ್ಲಿ ಬೆಳಕಿಗೆ ತಂದಿದ್ದರು.
1951ರ ಮೇ 21ರಂದು ಟೋಕಿಯೊ ಮಿಷನ್ ಮುಖ್ಯಸ್ಥ ಕೆ.ಕೆ.ಚೆತ್ತೂರ್ ಅವರು, ಕಾಮನ್ವೆಲ್ತ್ ಸಂಬಂಧಗಳ ಕಾರ್ಯದರ್ಶಿ ಬಿ.ಎನ್.ಚಕ್ರವರ್ತಿ ಅವರಿಗೆ ಬರೆದ ಪತ್ರದಲ್ಲಿ ಈ ಸಂಶಯ ವ್ಯಕ್ತಪಡಿಸಿದ್ದು, ಬೋಸ್ ಸಹಚರ ಹಾಗೂ ಪ್ರಚಾರ ಸಚಿವ ಎಸ್.ಎ.ಅಯ್ಯರ್ ಹಾಗೂ ಇಂಡಿಯನ್ ಇಂಡಪೆಂಡೆನ್ಸ್ ಲೀಗ್‌ನ ಟೋಕಿಯೊ ಮುಖ್ಯಸ್ಥ ಮುಂಗಾ ರಾಮಮೂರ್ತಿ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.
"ನಿಮಗೆ ಈಗಾಗಲೇ ತಿಳಿದಿರುವಂತೆ ರಾಮಮೂರ್ತಿ ವಿರುದ್ಧ ಇಂಡಿಯನ್ ಇಂಡಪೆಂಡೆನ್ಸ್ ಲೀಗ್‌ನ ನಿಧಿ ದುರ್ಬಳಕೆ ಮಾಡಿಕೊಂಡ ಆರೋಪವಿದೆ. ಜತೆಗೆ ಸುಭಾಸ್ ಅವರ ವೈಯಕ್ತಿಕ ಆಸ್ತಿಯ ವಿಚಾರದಲ್ಲೂ ಇದು ನಡೆದಿದೆ ಎಂಬ ಸಂಶಯವಿದೆ. ಅಪರೂಪದ ಪ್ರಾಚೀನ ವಸ್ತುಗಳು, ವಜ್ರದ ಆಭರಣಗಳು, ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳು ಅದರಲ್ಲಿದ್ದವು. ಸರಿಯೋ ತಪ್ಪೋ ಗೊತ್ತಿಲ್ಲ; ಅಯ್ಯರ್ ಹೆಸರೂ ಅದರಲ್ಲಿ ಸೇರಿಕೊಂಡಿದೆ" ಎಂದು ವಿವರಿಸಿದ್ದರು.
ಇದಕ್ಕೆ ಪ್ರತಿಯಾಗಿ ಕೆ.ಕೆ.ಚೆತ್ತೂರ್ ಅವರು 1951ರ ಅಕ್ಟೋಬರ್ 20ರಂದು ಪತ್ರ ಬರೆದು, ಜಪಾನ್ ಸರ್ಕಾರ ರಹಸ್ಯವಾಗಿ "ಭಾರಿ ಪ್ರಮಾಣದ ಚಿನ್ನದ ಆಭರಣಗಳು ಹಾಗೂ ಅಮೂಲ್ಯ ಹರಳುಗಳು ಸುಭಾಸ್ ಜತೆಗಿದ್ದವು. ಆದರೆ ದುರಂತಕ್ಕೀಡಾದ ವಿಮಾನದಲ್ಲಿ ಎರಡು ಸೂಟ್‌ಕೇಸ್ ಮಾತ್ರ ಒಯ್ಯಲು ಅವಕಾಶ ನೀಡಲಾಗಿದೆ" ಎಂದು ಟೋಕಿಯೊ ಮಿಷನ್‌ಗೆ ಪತ್ರ ಬರೆದಿದೆ ಎಂದು ಸ್ಪಷ್ಟಪಡಿಸಿದ್ದರು.
ಇದರ ಜತೆಗೆ ಪಕ್ಷದ ಕಡೆಯಿಂದ ಟೋಕಿಯೊ ಮಿಷನ್‌ಗೆ ಹಸ್ತಾಂತರಿಸಿದ್ದಕ್ಕಿಂತ ಭಾರಿ ಅಧಿಕ ಮೌಲ್ಯದ ವಸ್ತುಗಳು ಸುಭಾಸ್ ಬಳಿ ಇದ್ದವು ಎಂದು ವಿವರಿಸಲಾಗಿತ್ತು. ಮತ್ತೊಂದು ಪತ್ರದಲ್ಲಿ ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಭಾರತಕ್ಕೆ ಬರೆದ ಪತ್ರದಲ್ಲಿ ಅಯ್ಯರ್ ಅವರ ಚಟುವಟಿಕೆಗಳು ಅನುಮಾನಾಸ್ಪದ ಎಂದು ಸ್ಪಷ್ಟಪಡಿಸಿತ್ತು.







