ಹಳೆಯ ಆರೋಪಿಗಳ ಬಂಧನ
ಉಳ್ಳಾಲ: ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ಮೇರೆಗೆ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಿನ್ಯ ಸಮೀಪದ ಮುಹಮ್ಮದ್ ಮೋನು, ಅಬ್ಬಾಸ್, ಸೋಮೇಶ್ವರ ಉಚ್ಚಿಲದ ಮುರಳೀಧರ ಹಾಗೂ ಸಂದೇಶ್ ಎಂದು ಗುರುತಿಸಲಾಗಿದೆ.
ಮೋನು ಹಾಗೂ ಅಬ್ಬಾಸ್ ಕೆಲವು ವರ್ಷಗಳ ಹಿಂದೆ ಮಹಿಳೆಯೊಬ್ಬರಿಗೆ ಕ್ಷುಲ್ಲಕ ವಿಚಾರಕ್ಕೆ ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿ ದೂರು ದಾಖಲಿಸಿದ್ದ ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಕಳುಹಿಸಿದ್ದರು.
ಇಬ್ಬರಿಗೂ ಎರಡು ಬಾರಿ ಸಮನ್ಸ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಸಂದೇಶ್ ಹಾಗೂ ಮುರಳಿ ಉಳ್ಳಾಲ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ದೂರು ದಾಖಲಾಗಿದ್ದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ಸಮನ್ಸ್‌ಗೆ ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ಅವರಿಗೂ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಎರಡು ಪ್ರಕರಣ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ನಾಲ್ವರು ಆರೋಪಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.







