ಚುಟುಕು ವಿಶ್ವಕಪ್, ಏಷ್ಯಾಕಪ್‌ಗೆ ಟೀಮ್ ಇಂಡಿಯಾ ಪ್ರಕಟ; ಕರ್ನಾಟಕದ ಆಟಗಾರರಿಗಿಲ್ಲ ಸ್ಥಾನ

ಹೊಸದಿಲ್ಲಿ, ಫೆ.5: ಮುಂಬರುವ ಟ್ವೆಂಟಿ-20 ವಿಶ್ವಕಪ್ ಮತ್ತು ಏಷ್ಯಾ ಕಪ್ ಟ್ವೆಂಟಿ-20 ಟೂರ್ನಮೆಂಟ್‌ಗೆ ಟೀಮ್ ಇಂಡಿಯಾವನ್ನು ಇಂದು ಪ್ರಕಟಿಸಲಾಗಿದ್ದು, ಹದಿನೈದು ಮಂದಿ ಆಟಗಾರರ ಪಟ್ಟಿಯಲ್ಲಿ ಕರ್ನಾಟಕದ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ.
ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಟ್ವೆಂಟಿ-20 ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಮಾಡಿದ್ದ ತಂಡದಲ್ಲಿದ್ದ ಬಹುತೇಕ ಆಟಗಾರರು ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ಧಾರೆ. ಆಸ್ಟ್ರೇಲಿಯದಲ್ಲಿ ಅಂತಿಮ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿ ತಂಡದ ಗೆಲುವಿಗೆ ನೆರವಾಗಿದ್ದ ಕರ್ನಾಟಕದ ಮನೀಷ್ ಪಾಂಡೆಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಅಜಿಂಕ್ಯ ರಹಾನೆ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಪಾಂಡೆ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದೀಗ ರಹಾನೆ ತಂಡಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಪಾಂಡೆಗೆ ಅವಕಾಶ ಸಿಕ್ಕಿಲ್ಲ.
ಯುವ ಆಲ್‌ರೌಂಡರ್ ಪವನ್ ನೇಗಿ , ಸ್ಟಾರ್ ವೇಗಿ ಬಂಗಾಳದ ವೇಗಿ ಮುಹಮ್ಮದ್ ಶಮಿ ತಂಡಕ್ಕೆ ವಾಪಸಾಗಿದ್ದರು. ಕಳೆದ ವಿಶ್ವಕಪ್‌ನ ಬಳಿಕ ಶಮಿ ಟೀಮ್ ಇಂಡಿಯಾದ ಪರ ಆಡಿಲ್ಲ. ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರೂ, ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು.
ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ವಿಶ್ವಕಪ್, ಏಷ್ಯಾಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇತ್ತೀಚೆಗೆ ಸೀಮಿತ ಓವರ್‌ಗಳ ಕ್ರಿಕೆಟ್ ಪ್ರವೇಶಿಸಿದ್ದ ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯಗೆ ಅವಕಾಶ ಸಿಕ್ಕಿದೆ. ಇದೇ ವೇಳೆ ಅನುಭವಿ ಬೌಲರ್‌ಗಳಾದ ಇಶಾಂತ್ ಶರ್ಮ ಮತ್ತು ಭುವನೇಶ್ವರ ಕುಮಾರ್‌ಗೆ ಅವಕಾಶ ನಿರಾಕರಿಸಲಾಗಿದೆ.
ವಿಶ್ವಕಪ್ ಟ್ವೆಂಟಿ-20, ಏಷ್ಯಾ ಕಪ್‌ಗೆ ಭಾರತದ ತಂಡ: ಮಹೇಂದ್ರ ಸಿಂಗ್ ಧೋನಿ(ನಾಯಕ/ವಿಕೆಟ್‌ಕೀಪರ್), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಆಶಿಷ್ ನೆಹ್ರಾ, ಹರ್ಭಜನ್ ಸಿಂಗ್, ಮುಹಮ್ಮದ್ ಶಮಿ, ಪವನ್ ನೇಗಿ.
‘‘ ಆಟಗಾರರು ಯಾವಾಗ ನಿವೃತ್ತಿಯಾಗಬೇಕೆಂದು ಹೇಳುವ ಅಧಿಕಾರ ನಮಗಿಲ್ಲ. ನಾವು ಧೋನಿ ನಾಯಕತ್ವದಲ್ಲಿ ನಂಬಿಕೆ ಇರಿಸಿದ್ದೇವೆ. ಅವರು ಏಷ್ಯಾ ಕಪ್ ಮತ್ತು ವಿಶ್ವಕಪ್ ತಂಡವನ್ನು ಮುನ್ನಡೆಸಲು ಸಮರ್ಥ ವ್ಯಕ್ತಿ ’’ -ಸಂದೀಪ್ ಪಾಟೀಲ್ , ಆಯ್ಕೆ ಸಮಿತಿ ಅಧ್ಯಕ್ಷ
,,,,,,,,,,,,,,,
ವಿಶ್ವಕಪ್, ಏಷ್ಯಾ ಕಪ್ ಬಗ್ಗೆ ಒಂದಿಷ್ಟು.....
* ಏಷ್ಯಾ ಕಪ್ ಬಾಂಗ್ಲಾದೇಶದಲ್ಲಿ ಫೆ.24ರಿಂದ ಮಾ.6ರ ತನಕ ನಡೆಯಲಿದೆ. ಅರ್ಹತಾ ಸುತ್ತಿನ ಪಂದ್ಯ ಫೆ.19ರಿಂದ 22ರ ತನಕ ನಡೆಲಿದೆ.
*ಭಾರತ ಫೆ.24ರಂದು ಮೀರ್ಪುರದಲ್ಲಿ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ.
*ಫೆ.27ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡ, ಮಾ.1 ಶ್ರೀಲಂಕಾ ಮತ್ತು ಮಾ3ರಂದು ಅರ್ಹತಾ ಸುತ್ತಿನಲ್ಲಿ ವಿಜಯಿ ತಂಡವನ್ನು ಭಾರತ ಎದುರಿಸಲಿದೆ.
* ಮೊದಲ ಬಾರಿ ಏಷ್ಯಾಕಪ್ 50 ಓವರ್‌ಗಳ ಬದಲಾಗಿ ಟ್ವೆಂಟಿ-20 ಟೂರ್ನಿಯಾಗಿ ಬದಲಾಗಿದೆ.
*ವಿಶ್ವಕಪ್ ಮಾರ್ಚ್ 8ರಂದು ಆರಂಭವಾಗಲಿದೆ. ಜಾಮ್ತಾದ ವಿಸಿಎ ಸ್ಟೇಡಿಯಂನಲ್ಲಿ ಮಾ.8ರಂದು ಭಾರತ ತಂಡ ನ್ಯೂಝಿಲೆಂಡ್‌ನ್ನು ಎದುರಿಸಲಿದೆ.





