ಫೆ.7: NWF ವತಿಯಿಂದ 'ಸ್ವಾಭಿಮಾನದತ್ತ ದೃಢ ಹೆಜ್ಜೆಗಳು, ರಾಷ್ಟ್ರೀಯ ಸಾರಥಿಗಳಿಗೆ ಅಭಿನಂದನಾ ಸಭೆ'

ಮಂಗಳೂರು: ನ್ಯಾಷನಲ್ ವುಮೆನ್ಸ್ ಫ್ರಂಟ್, ಕರ್ನಾಟಕ ವತಿಯಿಂದ ಸ್ವಾಭಿಮಾನದತ್ತ ದೃಢ ಹೆಜ್ಜೆಗಳು, ರಾಷ್ಟ್ರೀಯ ಸಾರಥಿಗಳಿಗೆ ಅಭಿನಂದನಾ ಸಭೆಯು ಫೆ.7ರಂದು ಸಂಜೆ 3.30ಕ್ಕೆ ಮಂಗಳೂರಿನ ಬಲ್ಮಠ ಸರ್ಕಲ್ ಸಮೀಪದ ಶಾಂತಿ ನಿಲಯದಲ್ಲಿ ನಡೆಯಲಿದೆ.
ಶಾಹಿದಾ ಮಂಗಳೂರು (ಮಹಿಳಾಪರ ಹೋರಾಟಗಾರರು) ಕಾರ್ಯಕ್ರಮವನ್ನು ಉದ್ಘಾಟಿಸುವರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ವುಮೆನ್ಸ್ ಇಂಡಿಯಾ ಮೂವುಮೆಂಟ್ ಇದರ ಅಧ್ಯಕ್ಷೆ ಯಾಸ್ಮಿನ್ ಫಾರೂಕಿ ರಾಜಸ್ಥಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನ್ಯಾಷನಲ್ ವುಮೆನ್ಸ್ ಫ್ರಂಟ್, ಕರ್ನಾಟಕ ಇದರ ಅಧ್ಯಕ್ಷೆ ಫಾತಿಮಾ ನಸೀಮಾ ಅಧ್ಯಕ್ಷತೆ ವಹಿಸುವರು.
ಮಹಿಳಾ ಘನತೆ ಮತ್ತು ಸ್ವಾಭಿಮಾನದ ಬದುಕಿಗಾಗಿ ಹೋರಾಟಗಳು ಹಿಂದಂತಿಗಿಂತಲೂ ಹೆಚ್ಚು ದೃಢವಾಗಿರಬೇಕಾದ ಸಮಯ ಇದು, ನಮ್ಮ ಪ್ರತಿಯೊಂದು ಹೆಜ್ಜೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ದೇಶ ಸ್ವಾತಂತ್ರ್ಯಗೊಂಡು 68 ವರ್ಷ ಕಳೆದರೂ ಮಹಿಳಾ ಸಬಲೀಕರಣ ತೆವಳುತ್ತಾ ಸಾಗಿದೆ. ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಮಹಿಳೆಯರು ಬದುಕುವ ಮತ್ತು ಹುಟ್ಟುವ ಹಕ್ಕುಗಳಿಗಾಗಿ ಇವತ್ತೂ ಕೂಡಾ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಇತ್ತೀಚಿನ ಜನಗಣತಿಯಲ್ಲಿ ಪುರುಷ, ಮಹಿಳಾ ಸಂಖ್ಯಾ ಅನುಪಾತವು ಅದನ್ನು ಎತ್ತಿ ತೋರಿಸುತ್ತಿದೆ.
ಮಹಿಳೆಯರ ಜನ ಸಂಖ್ಯೆಯಲ್ಲಿ ಅತೀ ಹೆಚ್ಚು ಅಲ್ಪಸಂಖ್ಯಾತ, ದಲಿತ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳಯರು ಹಕ್ಕು, ಸ್ವಾತಂತ್ರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಮಹಿಳೆಯರ ಸಬಲೀಕರಣವಾಗದೆ ದೇಶದ ಸಬಲೀಕರಣವನ್ನು ಘೋಷಿಸಲು ಅಸಾಧ್ಯ. ಏಕತೆ, ದೃಢತೆ ಮತ್ತು ನಿರಂತರವಾದ ಹೋರಾಟಗಳಿಂದ ತಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ.
ಬನ್ನಿ ಐಕ್ಯರಾಗೋಣ ಮತ್ತು ದೇಶದ ಪ್ರತಿಯೋರ್ವ ಮಹಿಳೆಯನ್ನು ತಲುಪೋಣ. ದೇಶದ ಪ್ರತಿಯೋರ್ವ ತಾಯಿ, ಸಹೋದರಿ ಮತ್ತು ಮಗಳನ್ನು ಗುರುತಿಸಲು ನ್ಯಾಷನಲ್ ವುಮೆನ್ಸ್ ಫ್ರಂಟ್ ಪ್ರಯತ್ನಿಸುತ್ತಿದೆ. ಆತ್ಮ ವಿಶ್ವಾಸದ ಬೀಜಗಳನ್ನು ಬಿತ್ತೋಣ, ಪ್ರಬಲ ಶಕ್ತಿಯಾಗಿ ಮುಂದುವರಿಯೋಣ. ನಾವು ಮಹಿಳೆಯರ ಧ್ವನಿಯಾಗಿದ್ದೇವೆ. ನಮ್ಮ ರೆಕ್ಕೆಗಳನ್ನು ವಿಸ್ತರಿಸೋಣ. ಗುಣಮಟ್ಟದ ಶಿಕ್ಷಣ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಗಳು ನಮ್ಮ ಕರ್ತವ್ಯಗಳಾಗಿವೆ. ಮಹಿಳಾ ಸಬಲೀಕರಣದ ನಮ್ಮ ಉದ್ದೇಶ ಮತ್ತು ಸ್ವಾತಂತ್ರ್ಯ ನಮ್ಮ ಗುರಿ.ಹೃದಯ ಹೀನರಿಗೆ ಶರಣಾಗದಿರೋಣ ಎಂಬ ದ್ಯೇಯದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.







