ತಾಂಝಾನಿಯ ವಿದ್ಯಾರ್ಥಿನಿ ಮೇಲೆ ಹಲ್ಲೆ ಪ್ರಕರಣ : ಏಕಪಕ್ಷೀಯ ವರದಿಗಾರಿಕೆ ವಿರುದ್ಧ ಬೆಂಗಳೂರಿಗರ ಆಕ್ರೋಶ

ಹೊಸದಿಲ್ಲಿ , ಫೆ. ೫ : ಕಳೆದ ರವಿವಾರ ತಾಂಝಾನಿಯ ವಿದ್ಯಾರ್ಥಿನಿಯ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ರಾಷ್ಟ್ರೀಯ ಮಾಧ್ಯಮಗಳು ಪಕ್ಷಪಾತಿಯಾಗಿ ವರದಿ ಮಾಡಿವೆ ಎಂದು ಬೆಂಗಳೂರು ಹಾಗು ಕರ್ನಾಟಕದ ಇತರೆಡೆಗಳ ಜನರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿಲ್ಲಿಯಲ್ಲಿರುವ ಇಂಗ್ಲಿಶ್ ಮಾಧ್ಯಮಗಳು ಕೇವಲ ಘಟನೆಯ ಒಂದು ಕಡೆಯ ಬಗ್ಗೆ ಮಾತ್ರ ಗಮನ ಕೊಟ್ಟು ಅದನ್ನೇ ವೈಭವೀಕರಿಸುತ್ತಿವೆ . ಆದರೆ ಅದರ ಇನ್ನೊಂದು ಮಗ್ಗುಲನ್ನು ಅಂದರೆ ಸ್ಥಳೀಯರ ಅಳಲನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂಬುದು ಅವರ ದೂರು. ಈ ಬಗ್ಗೆ ಸಾಕಷ್ಟು ಜನರು ಫೇಸ್ ಬುಕ್ ಹಾಗು ಟ್ವಿಟ್ಟರ್ ಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ನಡೆದದ್ದು "ಜನಾಂಗೀಯ ದಾಳಿ " ಎಂಬುದನ್ನು ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಸುಡಾನೀ ವಿದ್ಯಾರ್ಥಿಯೊಬ್ಬ ಅಪಘಾತ ಮಾಡಿ ಬಡ ೩೫ ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಮೇಲೆ ಸಿಟ್ಟಿಗೆದ್ದ ಸ್ಥಳೀಯರು ಅವರ ಮೇಲೆ ಹಲ್ಲೆ ಮಾಡಿದರು. ಆದರೆ ತಾಂಝಾನಿಯ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಖಂಡನೀಯ ಎಂದೂ ಜನ ಒಪ್ಪಿಕೊಂಡಿದ್ದಾರೆ. ಆಫ್ರಿಕನ್ ವಿದ್ಯಾರ್ಥಿಗಳು ಸ್ಥಳೀಯರಿಗೆ ಬಹಳ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಯಾವುದೇ ಮಾಧ್ಯಮಗಳು ಚಕಾರವೆತ್ತುತ್ತಿಲ್ಲ. ಆದರೆ ಇದೇ ಮಾಧ್ಯಮಗಳು " ಶೇಮ್ ಬೆಂಗಳೂರು" ಎಂದು ಹ್ಯಾಶ್ ಟ್ಯಾಗ್ ಮೂಲಕ ಬೆಂಗಳೂರಿಗೆ ಮಸಿ ಬಳಿಯಲು ತುದಿಗಾಲಲ್ಲಿ ನಿಂತಂತೆ ವರ್ತಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.





