ಬೆಂಗಳೂರು : ಜಲ ಮತ್ತು ಶಬ್ದ ಮಾಲೀನ್ಯ ತಗ್ಗಿಸಲು ಒಂದೇ ಒಂದು ಕಠಿಣ ನಿಯಮ ಜಾರಿಗೆ ತಂದಿಲ್ಲ,
ಬೆಂಗಳೂರು.ಫೆ.5: ಬೆಂಗಳೂರು ನಗರದಲ್ಲಿ ವಾಯು ಮಾಲೀನ್ಯ, ಜಲ ಮತ್ತು ಶಬ್ದ ಮಾಲೀನ್ಯ ತಗ್ಗಿಸಲು ಸಂವಿಧಾನಿಕ ಸಂಸ್ಥೆ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಒಂದೇ ಒಂದು ಕಠಿಣ ನಿಯಮ ಜಾರಿಗೆ ತಂದಿಲ್ಲ ಎಂದು ಪರಿಸರ, ವಿಜ್ಞಾನ, ತಂತ್ರಜ್ಞಾನ ಹಾಗೂ ಅರಣ್ಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಇಂದಿಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರದ ಬಳಿ ಸಮಗ್ರ ಯೋಜನಾ ವರದಿಯೇ ಇಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬೆಂಗಳೂರಿನ ಐಸೆಟ್‌ನಲ್ಲಿ ಅರಣ್ಯ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಕರಿತು ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ವನಿ ಕುಮಾರ್, ಮಾಲೀನ್ಯ ನಿಯಂತ್ರಣ ಮಂಡಳಿ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಮಾಲೀನ್ಯ ತಗ್ಗಿಸಲು ಕಠಿಣ ಕ್ರಮಗಳಿಗೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ 8 ರಿಂದ 9 ಸಾವಿರ ಆಸ್ಪತ್ರೆಗಳಿಂದ ಹೊರ ಹೊಮ್ಮುವ ಅಪಾಯಕಾರಿ ತ್ಯಾಜ್ಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲ. ಕೇವಲ 4 ಸಂಸ್ಕರಣಾ ಘಟಕಗಳು ಮಾತ್ರ ಇಲ್ಲಿವೆ. ತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಸಮಗ್ರ ಯೋಜನೆ ಇಲ್ಲವಾಗಿದೆ. ಸರ್ಕಾರದ ಕ್ರಮ ಆಘಾತ ಮತ್ತು ದಿಘ್ಭ್ರಮೆಗೆ ಕಾರಣವಾಗಿದೆ ಎಂದರು. ಬೆಂಗಳೂರು ಮಹಾನಗರದ ಪರಿಸರ ಮತ್ತಿತರ ಸಮಸ್ಯೆಗಳ ಬಗ್ಗೆ ನಿನ್ನೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದ್ದು, ಬೆಂಗಳೂರು ಅಭಿವೃದ್ಧಿ ಮತ್ತು ಸಮಸ್ಯೆಗಳ ಮೇಲುಸ್ತುವಾರಿಗಾಗಿಯೇ ಪ್ರತ್ಯೇಕ ಸಚಿವರನ್ನು ನೇಮಕ ಮಾಡಿರುವುದು ಸೂಕ್ತವಾಗಿದೆ. ಮುಖ್ಯಮಂತ್ರಿ ನೀಡಿರುವ ಸಲಹೆಗಳನ್ನು ಸಮಿತಿ ಸ್ವೀಕರಿಸಿದ್ದು ಸೂಕ್ತ ಕ್ರಮ ಜರುಗಿಸಲಿದೆ ಎಂದರು. ಒಟ್ಟಾರೆ ಕರ್ನಾಟಕದ ಪರಿಸರದ ಬಗ್ಗೆ, ವಿಶೇಷವಾಗಿ ಬೆಂಗಳೂರಿನ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಕರ್ನಾಟಕ ಸರ್ಕಾರದಿಂದ ವರದಿ ಸ್ವೀಕರಿಸಲಾಗಿದ್ದು ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ತಗ್ಗಿಸಲು ಹಾಗೂ ಕುಡಿಯುವ ನೀರಿನ ಗುಣಮಟ್ಟ ಪಾಲನೆಗೆ ಖಚಿತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಅಶ್ವನಿ ಕುಮಾರ್ ತಿಳಿಸಿದರು.
ದೇಶದ ಮಹತ್ವಾಕಾಂಕ್ಷೆಯ ಸಂಸ್ಥೆಯಾಗಿರುವ ಇಸ್ರೋಗೆ ಆಯವ್ಯಯದಲ್ಲಿ ನೀಡುತ್ತಿರುವ ಅನುದಾನದ ಮೊತ್ತವನ್ನು ಶೇಕಡಾ 50 ರಷ್ಟು ಹೆಚ್ಚುಸುವಂತೆ ಸಮಿತಿ ಸಂಸತ್ತಿಗೆ ಶಿಫಾರಸ್ಸು ಮಾಡಲಿರುವುದಾಗಿ ಅಶ್ವನಿ ಕುಮಾರ್ ಹೇಳಿದರು. ಪ್ರಸಕ್ತ ಕೇಂದ್ರ ಸರ್ಕಾರ ಇಸ್ರೋಗೆ 5 ಸಾವಿರದ 800 ಕೋಟಿ ರೂಪಾಯಿ ಆಯವ್ಯಯ ಅನುದಾನ ನೀಡುತ್ತಿದ್ದು, ಇದಕ್ಕೆ ಶೇಕಡಾ 50 ರಷ್ಟು ಹೆಚ್ಚುವರಿ ಅನುದಾನ ಸೇರಿಸಬೇಕೆಂದು ಶಿಫಾರಸ್ಸು ಮಾಡಲಾಗುವುದು. ದೇಶದ ಈ ಪ್ರತಿಷ್ಠಿತ ಸಂಸ್ಥೆಗೆ ಹಣಕಾಸು ತೊಂದರೆ ಎದುರಾಗಬಾರದು ಮತ್ತಷ್ಟು ನುರಿತ ಮಾನವ ಸಂಪನ್ಮೂಲವನ್ನು ಹೊಂದಲು ಹಾಗೂ ಸಂಶೋಧನಾ ಚಟುವಟಿಕೆ ಉತ್ತೇಜಿಸಲು ಹಣಕಾಸು ನೆರವು ಅಗತ್ಯ ಎಂದರು. ಇಸ್ರೋ ಸಂಸ್ಥೆಗೆ ಹೆಚ್ಚಿನ ಹಣಕಾಸು ದೊರಕಿಸಿಕೊಡಲು ಶಿಫಾರಸ್ಸು ಮಾಡುತ್ತಿದ್ದು, ಹೆಚ್ಚುವರಿ ಹಣ ದೊರೆತರೆ ಕೈಗೊಳ್ಳಬಹುದಾದ ಕಾರ್ಯ ಯೋಜನೆಗಳ ಬಗ್ಗೆ ವಿವರವಾದ ವರದಿ ನೀಡುವಂತೆ ಇಸ್ರೋಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇಸ್ರೋ ಸಂಸ್ಥೆಯ ಐ.ಆರ್.ಎನ್.ಎಸ್ ಉಪಗ್ರಹ ಮಾರ್ಚ್ 16 ರಂದು ಉಡಾವಣೆಯಾಗಲಿದೆ. ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಇಸ್ರೋ ಮಹೋನ್ನತ ಸ್ಥಾನ ಪಡೆದಿದೆ ಎಂದರು. ತಂಬಾಕು ಬೆಳೆಯಿಂದ 17 ಸಾವಿರ ಕೋಟಿ ರೂಪಾಯಿ ಆದಾಯವಿದೆ ಆದರೆ ಇದರಿಂದಾಗುವ ಪರಿಸರ ಹಾನಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಒಂದು ಲಕ್ಷ ಕೋಟಿ ರೂ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳಲ್ಲಿ ರೈತರಿಗೆ ಪರ್ಯಾಯ ಬೆಳೆಗಳ ಬಗ್ಗೆ ವಿವರಿಸುವ ವರದಿಯನ್ನು ಸಿದ್ಧಪಡಿಸುವಂತೆ ತಂಬಾಕು ಮಂಡಳಿಗೆ ಸೂಚಿಸಲಾಗಿದೆ ಎಂದರು.







