ಸುಳ್ಯ: ಬಿಜೆಪಿಗೆ ಹಲವೆಡೆ ಬಂಡಾಯದ ಬಿಸಿ
- ಜಾಲ್ಸೂರಿನಲ್ಲಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ, ಪಂಜದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಕ್ಷೇತರರಾಗಿ ನಾಮಪತ್ರ
ಸುಳ್ಯ: ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹಲವೆಡೆ ಬಿಜೆಪಿಯಲ್ಲಿ ಬಂಡಾಯದ ಭೀತಿ ಶುರುವಾಗಿದೆ. ಜಾಲ್ಸೂರು ತಾಲೂಕು ಪಂಚಾಯತ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಜಾಲ್ಸೂರು ಗ್ರಾಮ ಸಮಿತಿ ಅಧ್ಯಕ್ಷ ಸತೀಶ್ ಕೆಮನಬಳ್ಳಿ ಅವರಿಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಅವರು ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ವರ್ಗಕೆ ಮೀಸಲಾಗಿದ್ದ ಇಲ್ಲಿಯ ಅಭ್ಯರ್ಥಿಗಳಾಗಿ ಬಿಜಪಿಯಿಂದ ಹಲವು ಆಕಾಕ್ಷಿಗಳಿದ್ದರು. ಗೋಪಿನಾಥ್ ಬೊಳುಬೈಲು ಮತ್ತು ಸತೀಶ್ ಕೆಮನಬಳ್ಳಿಯವರ ಹೆಸರು ಅಂತಿಮ ಹಂತಕ್ಕೆ ಬಂದಿತ್ತು. ಪಕ್ಷ ವರಿಷ್ಠರು ಗೋಪಿನಾಥರ ಹೆಸರನ್ನು ಅಂತಿಮಗೊಳಿಸಿದ್ದರು. ಇದರಿಂದ ಅಸಮಾಧಾನಗೊಂಡ ಸತೀಶ್ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದು, ಜಾಲ್ಸೂರಿನ ಬಿಜೆಪಿ ಮುಖಂಡ ದಿನೇಶ್ ಅಡ್ಕಾರ್ ಮತ್ತಿತರರು ಸತೀಶ್ ಅವರನ್ನು ಬೆಂಬಲಿಸುತ್ತಿದ್ದಾರೆಂದು ತಿಳಿದು ಬಂದಿದೆ. ಕಳೆದ ಗ್ರಾಮಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭ ಕೂಡಾ ಇಲ್ಲಿ ಭಿನ್ನಮತ ಭುಗಿಲೆದ್ದು, ಬಂಡಾಯವಾಗಿ ಸ್ಪರ್ಧಿಸಿದ್ದವರು ಗೆಲುವು ಸಾಧಿಸಿದ್ದರು. ಬಳಿಕ ಅವರುನ್ನು ಪಕ್ಷದಿಂದ ಅಮಾನತುಗೊಳಿಸಿ ಇತ್ತೀಚೆಗೆ ಅಮಾನತನ್ನು ವಾಪಾಸ್ ತೆಗೆದುಕೊಳ್ಳಲಾಗಿತ್ತು.
ಪಂಜ:
ಪಂಜ ತಾಲೂಕು ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಕೂಡಾ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಪಂಜ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲಿ ಪಕ್ಷ ಲೋಕೇಶ್ ಬರೆಮೇಲು ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡ ಗುರುಪ್ರಸಾದ್ ಗುರುವಾರ ಪಂಜದಲ್ಲಿ ತನ್ನ ಕೆಲವು ಯುವ ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಕೈಗೊಂಡು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಬೆಳ್ಳಾರೆ:
ಬೆಳ್ಳಾರೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂ ಜಾಗರಣಾ ವೇದಿಕೆ ಮುಖಂಡ ಕರುಣಾಕರ ಬರೆಮೇಲು ಅವರು ಕೂಡಾ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿ ಬಿಜೆಪಿ ಎಸ್.ಎನ್.ಮನ್ಮಥರ ಹೆಸರನ್ನು ಅಂತಿಮಗೊಳಿಸಿತ್ತು. ಅವರು ಶುಕ್ರವಾರ ಊಳಿದ ಅಭ್ಯರ್ಥಿಗಳೊಂದಿಗೆ ನಾಮಪತ್ರ ಸಲ್ಲಿಸಬೇಕಿತ್ತು. ಕರುಣಾಕರ ಬರೆಮೇಲು ಕೂಡಾ ತನ್ನ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಸುಳ್ಯಕ್ಕೆ ಬಂದರು. ಈ ವಿಷಯ ತಿಳಿದ ಬಿಜೆಪಿ ನಾಯಕರು ಮನ್ಮಥರು ನಾಮಪತ್ರ ಸಲ್ಲಿಸುವುದನ್ನು ಮುಂದೂಡಿ ಕರುಣಾಕರರೊಂದಿಗೆ ಮಾತುಕತೆಗೆ ಮುಂದಾದರು. ಮುಂದಿನ ಬೆಳವಣಿಗೆ ಕಾದು ನೋಡಬೇಕಾಗಿದೆ.







