ತಾಂಜೇನಿಯ ಯುವತಿ ಮೇಲೆ ಹಲ್ಲೆ ಪ್ರಕರಣ: ತಾಂಜೇನಿಯಾದ ಹೈಕಮಿಶನರ್ ಜಾನ್ ಕಿಜಾಕಿ ಬೆಂಗಳೂರಿಗೆ

ಬೆಂಗಳೂರು, ಫೆ.5: ತಾಂಜೇನಿಯ ವಿದ್ಯಾರ್ಥಿನಿಯ ಮೇಲಿನ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ತಾಂಜೇನಿಯಾದ ಹೈಕಮಿಶನರ್ ಜಾನ್ ಕಿಜಾಕಿ ಇಂದು ಸಂಜೆ ಬೆಂಗಳೂರಿಗೆ ಆಗಮಿಸಿದರು.
ವಿಕಾಸಸೌಧಕ್ಕೆ ಆಗಮಿಸಿದ ಜಾನ್ ಕಿಜಾಕಿ ಅವರು ಗೃಹ ಸಚಿವ ಡಾ.ಪರಮೇಶ್ವರ ಅವರನ್ನು ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದರು.
ಜನಾಂಗೀಯ ದ್ವೇಷ ಕಾರಣವಲ್ಲ: ಜನಾಂಗೀಯ ದ್ವೇಷ ಕಾರಣವಲ್ಲ. ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿಲ್ಲ, ಮೆರವಣಿ ನಡೆಸಿಲ್ಲ ಎಂದು ರಾಜ್ಯ ಸರಕಾರ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.
ವಿದೇಶಾಂಗ ಇಲಾಖೆಗೆ ರಾಜ್ಯ ಸರಕಾರ ಪ್ರಕರಣಕ್ಕೆ ಸಂಬಂಧಿಸಿ ವಿವರವಾದ ವರದಿ ಸಲ್ಲಿಸಿದೆ.
ಪ್ರಕರಣದ ಬಗ್ಗೆ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಕೆಎಸ್‌ಆರ‍್ ಚರಣ್ ರೆಡ್ಡಿ ವರದಿ ತಯಾರಿಸಿದ್ಧಾರೆ.
ಕರ್ತವ್ಯ ಲೋಪ ಆರೋಪದ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಬಾಬು ಹಾಗೂ ಪೇದೆಗಳಾದ ಮಂಜುನಾಥ್ ಮತ್ತು ರಾಜಶೇಖರ್ ಎಂಬವರನ್ನು ಅಮಾನತುಗೊಳಿಸಲಾಗಿದ್ದು, ಪೊಲೀಸರ ಕರ್ತವ್ಯ ಲೋಪದ ತನಿಖೆಯನ್ನು ಎಸಿಪಿಯೊಬ್ಬರಿಗೆ ವಹಿಸಿಕೊಡಲಾಗಿದೆ.ನಗರ ಪೊಲೀಸ್ ಆಯುಕ್ತ ಎನ್ .ಎಸ್ .ಮೇಘರಿಕ್ ಅವರು ತಿಳಿಸಿದ್ದಾರೆ
ಹೆದರಿಕೆಯಿಂದಾಗಿ ಎರಡು ದಿನಗಳ ವರೆಗೆ ಸಂತ್ರಸ್ತೆ ದೂರು ನೀಡಿಲ್ಲ. ಬಳಿಕ ಪೊಲೀಸರಿಗೆ ಫ್ಯಾಕ್ಸ್ ಮೂಲಕ ದೂರು ನೀಡಲಾಗಿತ್ತು.ಪೊಲೀಸರು ಖುದ್ದು ಸಂತ್ರಸ್ತೆಯ ಬಳಿಗೆ ತೆರಳಿ ಆಕೆಯಿಂದ ಮಾಹಿತಿ ಪಡೆದು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೯ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್ .ಎಸ್ .ಮೇಘರಿಕ್ ಮಾಹಿತಿ ನೀಡಿದ್ದಾರೆ.
ಇಂದು ಸಂಜೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೇಘರಿಕ್ ಅವರು ತಿಳಿಸಿದ್ದಾರೆ.
ಹೆಸರುಘಟ್ಟ ಮುಖ್ಯರಸ್ತೆಯ ಗಣಪತಿ ನಗರದಲ್ಲಿ ಜನವರಿ 31ರಂದು ಮದ್ಯ ಸೇವಿಸಿದ್ದ ಸೂಡಾನ್ ವಿದ್ಯಾರ್ಥಿ ಮುಹಮ್ಮದ್ ಅಹದ್ (21) ಎಂಬಾತ ಮನಬಂದಂತೆ ಕಾರು ಚಾಲನೆ ಮಾಡಿದ ಪರಿಣಾಮವಾಗಿ ಸನಾವುಲ್ಲಾ ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಅವರ ಪತ್ನಿ ಶಬಾನಾ ತಾಜ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸನಾವುಲ್ಲಾ ಗಾಯಗೊಂಡಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕಾರಿನಲ್ಲಿದ್ದ ತಾಂಜೇನಿಯಾದ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ, ಕಾರಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.







