ದುಬೈ: ಕೇಂಬ್ರಿಜ್ ಅಂತಾರಾಷ್ಟೀಯ ಪರೀಕ್ಷೆ ‘ಜೆಮ್ಸ್’ ವಿದ್ಯಾರ್ಥಿಗಳ ಉತ್ಕೃಷ್ಟ ಸಾಧನೆ

ದುಬೈ: ಕೇಂಬ್ರಿಜ್ ಅಂತಾರಾಷ್ಟ್ರೀಯ ಪರೀಕ್ಷೆಗಳ 2015ನೆ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, ‘ಜೆಮ್ಸ್’ ಸಮೂಹದ ಐದು ಶಿಕ್ಷಣಸಂಸ್ಥೆಗಳ 24 ವಿದ್ಯಾರ್ಥಿಗಳು ಉತ್ಕೃಷ್ಟವಾದ ಸಾಧನೆಯನ್ನು ಮೊೆದಿದ್ದಾರೆ.
ದುಬೈನ ಕೇಂಬ್ರಿಜ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಫಯಾಝ್ ಹಕ್ ಅವರು ಪ್ರವಾಸೋದ್ಯಮ ಕುರಿತ ಪರೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿಯೇ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಇತರ 10 ಮಂದಿ ‘ಜೆಮ್ಸ್’ ವಿದ್ಯಾರ್ಥಿಗಳು, ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇತರ 13 ಜೆಮ್ ವಿದ್ಯಾರ್ಥಿಗಳಿಗೆ ‘ಉನ್ನತ ಸಾಧನೆ’ಯ ಪ್ರಶಸ್ತಿಗಳನ್ನು ನೀಡಲಾಗಿದೆ.
ಜೆಮ್ಸ್ ವೆಲ್ಲಿಂಗ್ಟನ್ ಅಕಾಡಮಿಯ ನಿಕೊಲಾಸ್ ಝನೆಲ್ಲಾ ಪೆಂಟೆಯಾಡೊ, ರಾಬಿನ್ ಆ್ಯಂಟನಿ ಪ್ರಿಚರ್ಡ್, ಜೆಮ್ಸ್ ವೆಲ್ಲಿಂಗ್ಟನ್ ಸ್ಕೂಲ್‌ನ ನಟಾಲಿಯಾ ನೌಫಾಲ್ ಉನ್ನತ ಸಾಧನೆ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಜೆಮ್ಸ್ ಸಮೂಹದ ಶಿಕ್ಷಣಸಂಸ್ಥೆಗಳ ಮುಖ್ಯ ಅಧಿಕಾರಿ ಪೀಟರ್ ಬರ್ಡೊನ್, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ನಮ್ಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅಸಾಧಾರಣ ಸಾಧನೆಗಳಿಗೆ ಈ ಪ್ರಶಸ್ತಿಗಳ ಮೂಲಕ ಮನ್ನಣೆ ದೊರೆತಿದೆ’’ ಎಂದರು. ಕೇಂಬ್ರಿಜ್ ಅಂತಾರಾಷ್ಟ್ರೀಯ ಪರೀಕ್ಷೆಗಳಲ್ಲಿ ಜಗತ್ತಿನಾದ್ಯಂತದ 40 ದೇಶಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆಗೈದ ಪ್ರತಿಭಾವಂತರಿಗೆ ‘ಕೇಂಬ್ರಿಜ್ ವಿದ್ಯಾರ್ಥಿ ಪುರಸ್ಕಾರ’ಗಳನ್ನು ನೀಡಲಾಗುತ್ತಿದೆ. ಈ ಬಾರಿ ಯುಎಇನ ಒಟ್ಟು 87 ವಿದ್ಯಾರ್ಥಿಗಳು ಈ ಪುರಸ್ಕಾರಗಳಿಗೆ ಆಯ್ಕೆಯಾಗಿದ್ದು, ಅವರಲ್ಲಿ 9 ಮಂದಿ ಗರಿಷ್ಠ ಅಂಕಗಳನ್ನು ಪಡೆದು ವಿಕ್ರಮ ಸಾಧಿಸಿದ್ದಾರೆ.







