ಬೆಂಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳ ಫಲಿತಾಂಶವನ್ನು ಜನಾದೇಶವೆಂದು ಪರಿಗಣಿಸುವುದು ಅನಿವಾರ್ಯ
ಬೆಂಗಳೂರು.ಫೆ.5: ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳ ಫಲಿತಾಂಶವನ್ನು ಜನಾದೇಶವೆಂದು ಪರಿಗಣಿಸುವುದು ಅನಿವಾರ್ಯ ಎಂದು ಏಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಬರುವ ವಿಧಾನಸಭಾ ಚುನಾವಣೆಗೆ ಈ ಪಂಚಾಯ್ತಿ ಚುನಾವಣೆಗಳು ಸ್ಪಷ್ಟ ದಿಕ್ಸೂಚಿಯಾಗಿದೆ. ಹೀಗಾಗಿ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುವಂತೆ ನಿರ್ದೇಶನ ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸಲುನೀವು ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜಂಟಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವಂತೆ ದಿಗ್ವಿಜಯ್‌ಸಿಂಗ್ ಸಂದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರುಶನಿವಾರದಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ.
ಒಂದು ವೇಳೆ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾವು ಕನಿಷ್ಟ ಪಕ್ಷ ಒಂದು ಸೀಟು ಗೆಲ್ಲಲಾಗಿದ್ದರೂ ಪರಿಸ್ಥಿತಿ ಬಿಗಡಾಯಿಸಿದೆ ಎಂಬ ಅರ್ಥ.ಅದಕ್ಕಿಂತ ಮುಖ್ಯವಾಗಿ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಬಂಪರ್ ಜಯ ಸಾಧಿಸದೆ ಹೋದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಗೆಲ್ಲುವುದಿಲ್ಲ ಎಂದೇ ಅರ್ಥ.
ಹೀಗಾಗಿ ಸ್ವಲ್ಪವೂ ಎಚ್ಚರ ತಪ್ಪದೆ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಗೆಲುವು ಸಾಧಿಸಿ.ಪ್ರಮುಖ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪೈಪೋಟಿಯ ಎದುರು ತಲೆ ಎತ್ತಿ ನಿಲ್ಲಿ ಎಂದು ಹೇಳಿದ್ದಾರೆ.
ಸಧ್ಯದ ಮಾಹಿತಿಯ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷಗಳಿಂದ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ಎದುರಾಗಲಿದೆ.ಆದ್ದರಿಂದ ಈ ವಿಷಯದಲ್ಲಿ ಸ್ವಲ್ಪವೂ ನಿರ್ಲಕ್ಷ್ಯ ತೋರಬೇಡಿ ಎಂದು ದಿಗ್ವಿಜಯ್‌ಸಿಂಗ್ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳಿಂದ ಹೈಕಮಾಂಡ್ ಆತಂಕಗೊಂಡಿದೆ.ಮೂಲಕಾಂಗ್ರೆಸ್ ನಾಯಕರು ಹಾಗೂ ವಲಸಿಗ ಕಾಂಗ್ರೆಸ್ಸಿಗರು ಎಂಬ ಪ್ರಶ್ನೆಯೇ ಬೆಳೆದು ನಿಲ್ಲಬಾರದಿತ್ತು.ಆದರೆ ಅದು ಬೆಳೆದು ನಿಂತಿದೆ.ಹೀಗಾಗಿ ಅಂತಹ ಮನ:ಸ್ಥಿತಿ ಗಟ್ಟಿಯಾಗುವ,ಆ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗುವ ಕೆಲಸ ನಡೆಯಲಿ ಎಂದು ದಿಗ್ವಿಜಯ್‌ಸಿಂಗ್ ಹೇಳಿದ್ದಾರೆ.
ಹೀಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡ ನಾಯಕ ದಿಗ್ವಿಜಯ್‌ಸಿಂಗ್ ಅವರ ಮಾತನ್ನು ಸಿಎಂ ಸಿದ್ಧರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದು ಇದೇ ಕಾರಣಕ್ಕಾಗಿ ತಾವು ಎಲ್ಲೆಲ್ಲಿ ಪ್ರವಾಸ ಹೋಗುತ್ತಾರೋ?ಅಲ್ಲೆಲ್ಲ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಪರಮೇಶ್ವರ್ ಅವರನ್ನೂ ಕರೆದುಕೊಂಡು ಹೋಗಲು ನಿರ್ಧರಿಸಿದ್ದು,ಶನಿವಾರದಿಂದಲೇ ಈ ಪ್ರವಾಸ ಆರಂಭವಾಗಲಿದೆ.







