ಮಂಗಳೂರು: ಫೆ.12 ರಂದು ಜಿಲ್ಲಾ ಮಟ್ಟದ ಕಾಂಗ್ರೆಸ್ ಪ್ರಣಾಳಿಕೆ
ಮಂಗಳೂರು,ಫೆ.5:ದ.ಕ ಜಿಲ್ಲೆಯನ್ನು ಸೋಲಾರ್ ಜಿಲ್ಲೆಯನ್ನಾಗಿ ಮಾಡುವ ಘೋಷಣೆ, ಎಲ್ಲಾ ಗ್ರಾ.ಪಂಗೆ ಬ್ರಾಡ್‌ಬ್ಯಾಂಡ್ ವ್ಯವಸ್ಥೆ, ಕೋಮುಗಲಭೆ ತಡೆಗಟ್ಟಲು ಗ್ರಾಮಮಟ್ಟದಲ್ಲಿ ಸೌಹಾರ್ದ ಸಮಿತಿ ರಚನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಜಿ.ಪಂ ಮತ್ತು ತಾ.ಪಂ ಚುನಾವಣೆಗೆ ಜಿಲ್ಲಾ ಮಟ್ಟದ ಪ್ರಣಾಳಿಕೆಯನ್ನು ಫೆ.12 ರಂದು ಬಿಡುಗಡೆ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ ಜಿಲ್ಲೆಯಲ್ಲಿ ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 30 ಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬರುವ ಗುರಿಯನ್ನಿರಿಸಿದ್ದು, ಜಿಲ್ಲೆಯ ಐದು ತಾ.ಪಂ ಗಳಲ್ಲಿ ಅಧಿಕಾರವನ್ನು ಪಡೆದುಕೊಳ್ಳಲಿದೆ ಎಂದು ಹೇಳಿದರು.ಫೆ.14 ಮತ್ತು 15 ರಂದು ಸಂಸದ ವೀರಪ್ಪ ಮೊಲಿ ಜ್ಲಿಲೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದು ಫೆ.14 ರಂದು ಮೂಡಬಿದ್ರೆಯಲ್ಲಿ ಮತ್ತು ಫೆ.15 ರಂದು ಜಿಲ್ಲೆಯ ಎಲ್ಲಾ ಬ್ಲಾಕ್ ಮಟ್ಟದಲ್ಲಿ ಪ್ರಚಾರ ನಡೆಸಲಿದ್ದಾರೆ . ಜಿಲ್ಲೆಯ ಎಲ್ಲಾ ಸಚಿವರು ಫೆ.16 ರಂದು ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು ಫೆ.17 ರಂದು ಮುಲ್ಕಿ, ಮೂಡಬಿದ್ರೆ, ಮಂಗಳೂರು ಉತ್ತರ, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ವಿರೋಧಿಸಿ ನೋಟ ಮತ ಚಲಾವಣೆಯನ್ನು ಮಾಡಲು ನಡೆಯುತ್ತಿರುವ ಪ್ರಚಾರದ ಬಗ್ಗೆ ಪ್ರತಿಕ್ರೀಯಿಸಿದ ಅವರು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ವಿಚಾರವನ್ನು ನಿರ್ಲಕ್ಷಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೋಟ ಮತದಾನ ಮಾಡುವುದು ಸರಿ ಅಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.





