ಡಬ್ಲುಇಎಫ್ ಪ್ರವಾಸೋದ್ಯಮ ಸೂಚ್ಯಂಕ ವರದಿ ವೈದ್ಯಕೀಯ ಸೌಲಭ್ಯಗಳ ಲಭ್ಯತೆಯಲ್ಲಿ ಸೌದಿ ನಂ.1

ರಿಯಾದ್: ವಿಶ್ವ ಆರ್ಥಿಕ ವೇದಿಕೆಯ (ಡಬ್ಲುಇಎಫ್) ಪ್ರವಾಸೋದ್ಯಮ ಸೂಚ್ಯಂಕದಲ್ಲಿ ಸೌದಿ ಅರೇಬಿಯವು ವೈದ್ಯಕೀಯ ಸೌಲಭ್ಯಗಳ ಲಭ್ಯತೆಯಲ್ಲಿ ಮೊದಲನೆ ಸ್ಥಾನವನ್ನು ಪಡೆದಿದೆ ಹಾಗೂ ಸ್ಪರ್ಧಾತ್ಮಕ ದರಗಳಿಗಾಗಿ 11ನೆ ಸ್ಥಾನವನ್ನು, ಪ್ರವಾಸಿ ವೆಚ್ಚಕ್ಕಾಗಿ 31ನೆ ಸ್ಥಾನವನ್ನು ಮತ್ತು ಶ್ರೀಮಂತ ಕಲಾಪರಂಪರೆಗಾಗಿ 55ನೆ ಸ್ಥಾನವನ್ನು ಆ ರಾಷ್ಟ್ರವು ಗಳಿಸಿದೆ.
ಪ್ರವಾಸೋದ್ಯಮ ಹಾಗೂ ರಾಷ್ಟ್ರೀಯ ಪರಂಪರೆ (ಎಸ್‌ಸಿಟಿಎನ್‌ಎಚ್)ಗಾಗಿನ ಸೌದಿ ಆಯೋಗದ ಮಾಧ್ಯಮ ವಿಭಾಗವು ಇತ್ತೀಚೆಗೆ ರಿಯಾದ್‌ನಲ್ಲಿ ಪ್ರಕಟಿಸಿದ ಹೇಳಿಕೆಯೊಂದರಲ್ಲಿ ಈ ವಿಷಯವನ್ನು ತಿಳಿಸಿದೆ. ಡಬ್ಲುಇಎಫ್ ಸಂಸ್ಥೆಯು ಇತ್ತೀಚೆಗೆ ಆಯೋಜಿಸಿದ ವಿಶ್ಲೇಷಣಾತ್ಮಕ ಅಧ್ಯಯನವೊಂದರ ಪ್ರಕಾರ, ಜನಸಾಮಾನ್ಯರಿಗೆ ಅತ್ಯಾಧುನಿಕ ವೈದ್ಯಕೀಯ ಕೇಂದ್ರಗಳ ಲಭ್ಯತೆಯ ವಿಷಯದಲ್ಲಿ ಸೌದಿ ಅರೇಬಿಯವು ನಂ.1 ಸ್ಥಾನದಲ್ಲಿದೆ. ಜನಸಂಖ್ಯೆಯ ಶೇಕಡವಾರು ಪ್ರಮಾಣದ ದೃಷ್ಟಿಯಿಂದ ಸೌದಿ ಅರೇಬಿಯದಲ್ಲಿ ಏಡ್ಸ್ ರೋಗದ ಪ್ರಮಾಣವು ಜಗತ್ತಿನಲ್ಲೇ ಅತ್ಯಂತ ಕನಿಷ್ಠವಾಗಿದೆ. ಇದಕ್ಕಿಂತಲೂ ಹೆಚ್ಚಾಗಿ, ಕಡಿಮೆ ತೆರಿಗೆಯ ಮಟ್ಟದಲ್ಲಿ ಅದು ಆರನೇ ಸ್ಥಾನದಲ್ಲಿದೆ ಹಾಗೂ ಆತ್ಮಹತ್ಯೆಯ ಪ್ರಕರಣಗಳ ಮಟ್ಟಿಗೆ 13ನೆ ಸ್ಥಾನಿಯಾಗಿದೆ.
ವಿಶ್ವ ಆರ್ಥಿಕ ವೇದಿಕೆಯ (ಡಬ್ಲುಇಎಫ್) ಪ್ರವಾಸೋದ್ಯಮ ಸೂಚ್ಯಂಕವು 141 ರಾಷ್ಟ್ರಗಳ ಪಟ್ಟಿಯಲ್ಲಿ ಸೌದಿ ಅರೇಬಿಯವನ್ನು 55ನೆ ಸ್ಥಾನದಲ್ಲಿರಿಸಿದೆ.
ಸೌದಿ ಅರೇಬಿಯ ಉತ್ತಮ ಗುಣಮಟ್ಟದ ವಾಯುಸಾರಿಗೆ ಮೂಲಸೌಕರ್ಯಗಳನ್ನು ಹೊಂದಿರುವುದನ್ನು ವರದಿಯು ಪ್ರಸ್ತಾಪಿಸಿದ್ದು, ಈ ವಿಷಯದಲ್ಲಿ ಅದಕ್ಕೆ ಜಾಗತಿಕ ಮಟ್ಟದಲ್ಲಿ 40ನೆ ಸ್ಥಾನ ನೀಡಿದೆ. ಪ್ರವಾಸೋದ್ಯಮ ಮೂಲಸೌಕರ್ಯ ವಿಭಾಗದಲ್ಲಿ ವರದಿಯು ಸೌದಿಗೆ 67ನೆ ಸ್ಥಾನ ನೀಡಿದ್ದರೆ, ವಾಯು ಹಾಗೂ ವಾಯುಸಾರಿಗೆ, ಸಮುದ್ರಯಾನ ಹಾಗೂ ಬಂದರುಗಳ ಗುಣಮಟ್ಟದಲ್ಲಿ 60ನೆ ಸ್ಥಾನವನ್ನು ನೀಡಿದೆ.
ಪ್ರವಾಸೋದ್ಯಮ ಸೇವಾ ಮೂಲಸೌಕರ್ಯ ಕ್ಷೇತ್ರದಲ್ಲಿ ಸೌದಿ ಅರೇಬಿಯ 67ನೆ ರ್ಯಾಂಕ್ ಪಡೆದಿದೆ. ಧಾರಣಾಶೀಲ ಅಭಿವೃದ್ಧಿ ಕುರಿತ ಪರಿಸರ ಸ್ನೇಹಿ ನೀತಿ ಹಾಗೂ ದೀರ್ಘಾವಧಿಯ ಪ್ರವಾಸೋದ್ಯಮ ಸ್ಪರ್ಧಾತ್ಮಕತೆಯಲ್ಲಿ ಅದು 121ನೆ ಸ್ಥಾನದಲ್ಲಿದೆ.
ಪ್ರವಾಸೋದ್ಯಮವು ಸೌದಿ ಅರೇಬಿಯದಲ್ಲಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ನೆರವಾಗುತ್ತಿದೆಯೆಂದು ಡಬ್ಲುಇಎಫ್ ತನ್ನ ವರದಿಯಲ್ಲಿ ಗಮನಸೆಳೆದಿದೆ. ಯಾವುದೇ ನಿರ್ದಿಷ್ಟ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರತಿ 30 ಮಂದಿ ಪ್ರವಾಸಿಗರಿಗೆ ಒಂದು ಹೊಸ ಉದ್ಯೋಗ ಸೃಷ್ಟಿಯಾಗುತ್ತದೆಯೆಂದು ವರದಿ ಹೇಳಿದೆ. ಅಧ್ಯಯನದ ಪ್ರಕಾರ,ಅತ್ಯಂತ ಸದೃಢವಾದ ಪ್ರವಾಸೋದ್ಯಮವನ್ನು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಸ್ಪೇನ್ ಮೊದಲನೆ ಸ್ಥಾನದಲ್ಲಿದೆ. ಫ್ರಾನ್ಸ್ ದ್ವಿತೀಯ ಸ್ಥಾನದಲ್ಲಿದೆ. ಜರ್ಮನಿ, ಅಮೆರಿಕ ಹಾಗೂ ಬ್ರಿಟನ್ ಕ್ರಮವಾಗಿ ಆನಂತರದ ಸ್ಥಾನಗಳಲ್ಲಿವೆ.
ಡಬ್ಲುಇಎಫ್ ಬಿಡುಗಡೆಗೊಳಿಸಿರುವ 2015-16ನೆ ಸಾಲಿನ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆ ಕುರಿತ ವರದಿಯು, ಅಧಿಕ ಬೆಳವಣಿಗೆಯನ್ನು ಸಾಧಿಸುವಲ್ಲಿ ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ಸೌದಿ ಆರ್ಥಿಕತೆಯ ಸಾಮರ್ಥ್ಯದ ಬಗ್ಗೆ ಬೆಳಕು ಚೆಲ್ಲಿದೆ. ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕ ಪ್ರಾಂತದಲ್ಲಿ ಅದು ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ.









