ಭಾರತ-ಪಾಕ್ ಮಾತುಕತೆ ಮುಂದುವರಿಕೆ ; ನವಾಝ್ ಶರೀಫ್ ವಿಶ್ವಾಸ

ಇಸ್ಲಾಮಾಬಾದ್, ಫೆ. 5: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಮಗ್ರ ದ್ವಿಪಕ್ಷೀಯ ಮಾತುಕತೆ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಮುಂದುವರಿಯುತ್ತದೆ ಎಂಬ ವಿಶ್ವಾಸವನ್ನು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಶುಕ್ರವಾರ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ಸೇರಿದಂತೆ ಎಲ್ಲ ಪ್ರಮುಖ ವಿಷಯಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಮಾತ್ರ ಬಗೆಹರಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಝಫ್ಫರಾಬಾದ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ‘ವಿಧಾನಸಭೆ’ಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಶರೀಫ್, ಭಯೋತ್ಪಾದನೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ಭಾರತದೊಂದಿಗೆ ಸಹಕರಿಸಲು ಪಾಕಿಸ್ತಾನ ಸಿದ್ಧವಿದೆ ಎಂದರು.
‘‘ಪಾಕಿಸ್ತಾನ ಭಯೋತ್ಪಾದನೆಗೆ ಹೆಚ್ಚು ನಲುಗಿದೆ. ಭಯೋತ್ಪಾದನೆಯನ್ನು ತೊಲಗಿಸಬೇಕೆಂದು ಪಾಕಿಸ್ತಾನಕ್ಕಿಂತ ಹೆಚ್ಚು ಯಾರು ಬಯಸುತ್ತಾರೆ?’’ ಎಂದು ಅವರು ಹೇಳಿದರು.
‘‘ಎರಡು ದೇಶಗಳ ನಡುವೆ ಭಿನ್ನಾಭಿಪ್ರಾಯವಿರುವುದು ಅಸಹಜವೇನಲ್ಲ. ಆದರೆ, ನಮಗೆ ಈ ಭಿನ್ನಾಭಿಪ್ರಾಯಗಳನ್ನು ಆರೇಳು ದಶಕಗಳ ಅವಧಿಯಲ್ಲೂ ಹೋಗಲಾಡಿಸಲು ಸಾಧ್ಯವಾಗಿಲ್ಲ ಎನ್ನುವುದು ಅಸಹಜವಾಗಿದೆ’’ ಎಂದರು.
ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಎಲ್ಲ ಪ್ರಮುಖ ವಿವಾದಗಳಿಗೆ ಪರಿಹಾರ ಮಾತುಕತೆಯಲ್ಲಿ ಅಡಗಿದೆ ಎಂದು ಶರೀಫ್ ಪುನರುಚ್ಚರಿಸಿದರು







