ಸೌದಿ: ಭಿಕ್ಷಾಟನೆ ವಿರುದ್ಧ ಬರಲಿದೆ ಕಠಿಣ ಕಾನೂನು

ಭಿಕ್ಷಾಟನೆಯ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಭಿಕ್ಷಾಟನೆ ಪಿಡುಗಿನ ಅಪಾಯಗಳ ವಿರುದ್ಧ ಸಾಮಾಜಿಕ ಜಾಗೃತಿ ಯನ್ನು ಮೂಡಿಸಲು ಕಾರ್ಯಚೌಕಟ್ಟನ್ನು ರೂಪಿಸುವುದು ಕೂಡಾ ಈ ಕಾಯ್ದೆಯ ಉದ್ದೇಶವಾಗಿದೆ.
ಸೌದಿ ಸಮಾಜದಲ್ಲಿ ದುರ್ಬಲರು, ಅಶಕ್ತರ ಬಗ್ಗೆ ಇರುವ ಸಹಾನುಭೂತಿಯ ಕಾರಣದಿಂದಾಗಿ, ಸೌದಿಯೊಳಗೆ ನುಸುಳಿರುವವರು ಭಿಕ್ಷಾಟನೆ ವೃತ್ತಿಯಲ್ಲಿ ತೊಡಗಿದ್ದಾರೆಂದು ಸಮಿತಿಯು ಹೇಳಿದೆ. ಭಿಕ್ಷಾಟನೆಯ ದಂಧೆಯನ್ನು ನಿಯಂತ್ರಿಸುವ ಗ್ಯಾಂಗ್‌ಗಳು ಸೌದಿಯಲ್ಲಿ ಸಕ್ರಿಯವಾಗಿರುವುದೂ ಕೂಡಾ ಬೆಳಕಿಗೆ ಬಂದಿದೆ.
ರಿಯಾದ್: ಸೌದಿಯ ಕುಟುಂಬ, ಸಾಮಾಜಿಕ ಹಾಗೂ ಯುವಜನ ವ್ಯವಹಾರಗಳ ಸಮಿತಿಯು, ಭಿಕ್ಷಾಟನೆ ವಿರೋಧಿ ಕಾನೂನಿನ ಕರಡು ಪ್ರತಿಯನ್ನು ರಚಿಸಿದ್ದು, ಅದನ್ನು ಶೂರಾ ಕೌನ್ಸಿಲ್‌ನಲ್ಲಿ ಮಂಡಿಸಿದೆ. ಮಕ್ಕಳು ಹಾಗೂ ಅಂಗವಿಕಲರನ್ನು ಭಿಕ್ಷಾಟನೆಗಾಗಿ ಬಳಸುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ 30 ಸಾವಿರ ಸೌದಿ ರಿಯಾಲ್‌ಗಳ ದಂಡವನ್ನು ವಿಧಿಸಲಾಗುತ್ತದೆ.
ಭಿಕ್ಷಾಟನೆಗಿಳಿದವರನ್ನು ಮೊದಲ ಬಾರಿ ಬಂಧಿಸಿದಾಗ, ಅವರನ್ನು ಬಂಧನದ ದಿನಾಂಕದಿಂದ ಹಿಡಿದು ಐದು ದಿನಗಳಿಗಿಂತ ಹೆಚ್ಚು ಸಮಯ ‘ವೆಲ್‌ಫೇರ್ ಹೋಂ’ನಲ್ಲಿ ಇರಿಸಕೂಡದೆಂದು, ಈ ಕರಡು ಕಾಯ್ದೆಯ ನಿಯಮವು ಪ್ರತಿಪಾದಿಸುತ್ತದೆ. ಇನ್ನೊಂದು ನಿಯಮವು ಭಿಕ್ಷುಕರಿಗೆ ವಿಧಿಸಬಹುದಾದ ದಂಡನೆಗಳನ್ನು ವಿವರಿಸಲಾಗಿದೆ. ಸೌದಿಯ ಭಿಕ್ಷುಕರನ್ನು, ವೆಲ್‌ಫೇರ್ ಹೋಂ (ಕ್ಷೇಮಗೃಹ)ಗಳಲ್ಲಿ ಆರು ತಿಂಗಳಿಗೂ ಅಧಿಕ ಸಮಯ ಬಂಧನದಲ್ಲಿಡಕೂಡದು ಅಥವಾ ಅವರಿಗೆ 10 ಸಾವಿರ ಸೌದಿ ರಿಯಾಲ್‌ಗಿಂತ ಅಧಿಕ ದಂಡವನ್ನು ವಿಧಿಸಬಾರದು. ಒಂದು ವೇಳೆ ಸೌದಿಯ ಭಿಕ್ಷುಕರು ಎರಡನೆ ಬಾರಿ ಬಂಧನಕ್ಕೊಳಗಾದಲ್ಲಿ, ಅವರನ್ನು ಒಂದು ವರ್ಷಕ್ಕೂ ಹೆಚ್ಚು ಅವಧಿಗೆ ಕ್ಷೇಮಗೃಹದಲ್ಲಿರಿಸಬಹುದಾಗಿದೆ ಅಥವಾ 20 ಸಾವಿರ ಸೌದಿ ರಿಯಾಲ್ ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ.
ಒಂದು ವೇಳೆ ಮೂರನೆ ಬಾರಿಗೆ ಬಂಧನಕ್ಕೊಳಗಾದಲ್ಲಿ, ವಯಸ್ಕ ಸೌದಿ ಭಿಕ್ಷುಕರನ್ನು ಎರಡು ವರ್ಷಗಳ ತನಕ ಜೈಲಿನಲ್ಲಿರಿಸಬಹುದಾಗಿದೆ ಹಾಗೂ 30 ಸಾವಿರ ಸೌದಿ ರಿಯಾಲ್ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಅವರು ನಾಲ್ಕನೆ ಬಾರಿಗೆ ಸಿಕ್ಕಿಬಿದ್ದಲ್ಲಿ, ಭಿಕ್ಷಾಟನೆಯ ಅವಧಿಗೆ ಅನುಗುಣವಾಗಿ ಅವರಿಗೆ ಶಿಕ್ಷೆಯನ್ನು ದುಪ್ಪಟ್ಟುಗೊಳಿಸಬಹುದಾಗಿದೆ ಹಾಗೂ ಭಿಕ್ಷಾಟನೆಯ ಮೂಲಕ ಅವರು ಸಂಗ್ರಹಿಸಿದ ಹಣವನ್ನು ವಶಪಡಿಸಿಕೊಂಡು ಅದನ್ನು ಸೇವಾಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಬಹುದಾಗಿದೆ.
ಮಕ್ಕಳು,ಮಹಿಳೆಯರು ಹಾಗೂ ಅಂಗವಿಕಲರ ಶೋಷಣೆಯಂತಹ ಗಂಭೀರ ಸಮಸ್ಯೆಗಳ ವಿರುದ್ಧ ಹೋರಾಡಲು ವ್ಯವಸ್ಥೆಯೊಂದನ್ನು ರೂಪಿಸುವಂತೆಯೂ ಸಮಿತಿಯು ಶಿಫಾರಸು ಮಾಡಿದೆ. ಭಿಕ್ಷಾಟನೆಯನ್ನೂ ಮಾನವಕಳ್ಳಸಾಗಣೆಯ ಒಂದು ರೂಪವಾಗಿ ಪರಿಗಣಿಸಬೇಕೆಂದು ಸಮಿತಿಯು ಶಿಫಾರಸು ಮಾಡಿದೆ.
ಈ ಕಾನೂನು 15 ಕಲಮುಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಮೊದಲನೆಯದು,ಜೀವನೋಪಾಯದ ಚಟುವಟಿಕೆಗಳನ್ನು ನಡೆಸದೆ ಇರುವವರನ್ನು, ಭಿಕ್ಷಾಟನೆಗಾಗಿ ರೋಗಪೀಡಿತರಂತೆ, ಬಡತನದಿಂದ ನರಳುವವರಂತೆ, ಅಂಗವಿಕಲರಂತೆೆ ಅಥವಾ ಅಶಕ್ತರಂತೆ ನಟಿಸುವವರನ್ನು ಭಿಕ್ಷುಕರೆಂದು ಗುರುತಿಸಲಾಗಿದೆ. ಮಹಿಳೆಯರನ್ನು ಬಳಸಿಕೊಂಡು ಅಥವಾ ಇನ್ನಾವುದೇ ವಿಧಾನಗಳ ಮೂಲಕ ಭಿಕ್ಷೆ ಬೇಡುವುದನ್ನು ಅಪರಾಧವೆಂದು ಈ ಕಾನೂನು ಪರಿಗಣಿಸುತ್ತದೆ.
ಭಿಕ್ಷಾಟನೆಯ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಭಿಕ್ಷಾಟನೆ ಪಿಡುಗಿನ ಅಪಾಯಗಳ ವಿರುದ್ಧ ಸಾಮಾಜಿಕ ಜಾಗೃತಿ ಯನ್ನು ಮೂಡಿಸಲು ಕಾರ್ಯಚೌಕಟ್ಟನ್ನು ರೂಪಿಸುವುದು ಕೂಡಾ ಈ ಕಾಯ್ದೆಯ ಉದ್ದೇಶವಾಗಿದೆ.
ಭಿಕ್ಷಾಟನೆಯನ್ನು ತಡೆಗಟ್ಟಬೇಕು ಹಾಗೂ ಭಿಕ್ಷೆ ಬೇಡುವವರನ್ನು ಬಂಧಿಸಬೇಕು ಹಾಗೂ ಅವರಿಗೆ ಕಾನೂನುವ್ಯವಸ್ಥೆಯ ಪ್ರಕಾರ ಶಿಕ್ಷೆ ವಿಧಿಸಬೇಕೆಂದು, ಈ ಕರಡು ಕಾಯ್ದೆಯ 3ನೆ ಕಲಮು ಪ್ರತಿಪಾದಿಸುತ್ತದೆ. ಸೌದಿಯ ಭಿಕ್ಷುಕರಿಗಾಗಿ ಮನೆಗಳನ್ನು ನಿರ್ಮಿಸಿಕೊಡುವಂತೆ ಕಲಮು 4 ಸೂಚಿಸುತ್ತದೆ. ತನಿಖಾದಳ ಹಾಗೂ ಸರಕಾರಿ ನ್ಯಾಯವಾದಿಗಳು ಈ ಮನೆಗಳ ತಪಾಸಣೆಯನ್ನು ನಡೆಸಬೇಕೆಂದು ಅದು ತಿಳಿಸಿದೆ.
ಸೌದಿಯ ವಿವಿಧ ಪ್ರಾಂತಗಳಲ್ಲಿ ಭಿಕ್ಷಾಟನೆಯ ವಿರುದ್ಧ ಹೋರಾಡಲು ಸಮಿತಿಗಳನ್ನು ರಚಿಸುವಂತೆಯೂ ಕರಡು ಕಾಯ್ದೆಯ 4 ಹಾಗೂ 6 ಕಲಮುಗಳು ಶಿಫಾರಸು ಮಾಡಿವೆ. ಕ್ಷೇಮಗೃಹಗಳಲ್ಲಿ ತರಬೇತಿ ಪಡೆದ ಹಾಗೂ ಪುನರ್ವಸತಿಗೊಂಡಿರುವ ಸೌದಿಯ ಭಿಕ್ಷುಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಸಚಿವಾಲಯವು, ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯದೊಂದಿಗೆ ಕೆಲಸ ಮಾಡಬೇಕೆಂದು 8ನೆ ನಿಯಮವು ಪ್ರತಿಪಾದಿಸಿದೆ. ಕಳೆದ ಕೆಲವು ವರ್ಷಗಳಿಂದ ಸೌದಿಯಲ್ಲಿ ಭಿಕ್ಷಾಟನೆಯ ಪಿಡುಗು ಹೆಚ್ಚಿರುವುದಾಗಿ ಅಧ್ಯಯನ ವರದಿಗಳನ್ನು ಅಧ್ಯಯನ ಮಾಡಿದ ಬಳಿಕ ಸಮಿತಿಯು ಈ ಶಿಫಾರಸುಗಳನ್ನು ಮಾಡಿದೆ.
ಸೌದಿ ಸಮಾಜದಲ್ಲಿ ದುರ್ಬಲರು, ಅಶಕ್ತರ ಬಗ್ಗೆ ಇರುವ ಸಹಾನುಭೂತಿಯ ಕಾರಣದಿಂದಾಗಿ, ಸೌದಿಯೊಳಗೆ ನುಸುಳಿರುವವರು ಭಿಕ್ಷಾಟನೆ ವೃತ್ತಿಯಲ್ಲಿ ತೊಡಗಿದ್ದಾರೆಂದು ಸಮಿತಿಯು ಹೇಳಿದೆ. ಭಿಕ್ಷಾಟನೆಯ ದಂಧೆಯನ್ನು ನಿಯಂತ್ರಿಸುವ ಗ್ಯಾಂಗ್‌ಗಳು ಸೌದಿಯಲ್ಲಿ ಸಕ್ರಿಯವಾಗಿರುವುದೂ ಕೂಡಾ ಬೆಳಕಿಗೆ ಬಂದಿದೆ.
ಶೂರಾ ಕೌನ್ಸಿಲ್‌ನ ಮಾಜಿ ಸದಸ್ಯರಾದ ಸಾದ್ ಮಾರೆಖ್ ಹಾಗೂ ನಾಸಿರ್ ಅಲ್-ಶಹರಾನಿ ಸಲ್ಲಿಸಿದ ಈ ಕರಡು ಕಾನೂನನ್ನು ಸಮಿತಿಯು ಅಧ್ಯಯನ ಮಾಡಿದೆ.








